ಯೂರಿಯಾ ಕೊರತೆ ನೀಗಿಸಲು ರೈತರ ಆಗ್ರಹ

| Published : Sep 09 2025, 01:00 AM IST

ಸಾರಾಂಶ

ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ರೈತಾಪಿಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿ ಹಸಿ ಇದ್ದಾಗಲೇ ವಿವಿಧ ಬೆಳೆಗಳನ್ನು ಬೆಳೆಯಲು ಅಗತ್ಯವಿರುವ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ರೈತಾಪಿಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿ ಹಸಿ ಇದ್ದಾಗಲೇ ವಿವಿಧ ಬೆಳೆಗಳನ್ನು ಬೆಳೆಯಲು ಅಗತ್ಯವಿರುವ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಪಟ್ಟಣದ ಹಲವಾರು ಗೊಬ್ಬರದ ಅಂಗಡಿಗಳಲ್ಲಿ ಮತ್ತು ಸಹಕಾರ ಸಂಘಗಳಲ್ಲಿ ಯೂರಿಯಾ ಗೊಬ್ಬರದ ಕೊರತೆ ಇದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಯೂರಿಯಾ ಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕೆಂದು ರೈತಾಪಿಗಳು ಜಾಗೃತದಳದ ಅಧಿಕಾರಿಗಳಿಗೆ ಮತ್ತು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ಒತ್ತಾಯ ಮಾಡಿದ್ದಾರೆ.

ಇಂದು ಜಿಲ್ಲಾ ಕೃಷಿ ಇಲಾಖಾ ವತಿಯಿಂದ ಆಗಮಿಸಿದ್ದ ಕೃಷಿ ಅಧಿಕಾರಿಗಳು ಪಟ್ಟಣದ ವಿವಿಧ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಯೂರಿಯಾ ಗೊಬ್ಬರದ ವಿತರಣೆ ಸಂಬಂಧ ಅಂಗಡಿಯ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್. ಆರ್.ಜಯರಾಮ್, ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜು, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಟಿ.ಎನ್.ಶಶಿಶೇಖರ್, ಕನ್ನಡ ರಕ್ಷಾಣಾ ವೇದಿಕೆಯ ಅಧ್ಯಕ್ಷ ಗವಿರಂಗಪ್ಪ ಮತ್ತು ಚೌಡೇನಹಳ್ಳಿಯ ಗಂಗಾಧರ ಸ್ವಾಮಿ ಸೇರಿದಂತೆ ಹಲವರು ಜಿಲ್ಲಾ ಕೃಷಿ ನಿರ್ದೇಶಕರ ಕಛೇರಿಯಿಂದ ಆಗಮಿಸಿದ್ದ ಕೃಷಿ ಅಧಿಕಾರಿ ಅಶ್ವತ್ಧ್ ನಾರಾಯಣ್ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಬಿ. ಪೂಜಾ ರವರನ್ನು ಭೇಟಿ ಮಾಡಿ ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ಇದೆ. ಇದರಿಂದಾಗಿ ರೈತಾಪಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಯೂರಿಯಾವನ್ನು ತಾಲೂಕಿನ ಎಲ್ಲಾ ಗೊಬ್ಬರದ ಅಂಗಡಿಗಳು ಮತು ಸಹಕಾರ ಸಂಘಗಳಿಗೆ ಸರಬರಾಜು ಮಾಡಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಕೆಲವು ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಜೊತೆಗೆ ಲಿಂಕ್ ಎಂದು ವಿವಿಧ ರಾಸಾಯನಿಕ ದ್ರವ್ಯಗಳನ್ನು ನೀಡಲಾಗುತ್ತಿದೆ. ಇದು ರೈತಾಪಿಗಳಿಗೆ ಹೊರೆಯಾಗುತ್ತದೆ. ಈ ರೀತಿ ಮಾಡದೇ ರೈತರು ಕೇಳುವ ವಸ್ತುಗಳನ್ನು ಮಾತ್ರ ನೀಡಬೇಕೆಂದು ಆಗ್ರಹಿಸಿದರು. ಈ ಕುರಿತು ಮಾತನಾಡಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ ಇನ್ನು ಒಂದೆರೆಡು ದಿನಗಳಲ್ಲಿ ಯೂರಿಯಾ ಗೊಬ್ಬರ ತಾಲೂಕಿಗೆ ಸರಬರಾಗಲಿದೆ. ಯಾವುದೇ ತೊಂದರೆಯಾಗದು. ರೈತಾಪಿಗಳು ತಮಗೆ ಸಮೀಪವಿರುವ ಗೊಬ್ಬರದ ಅಂಗಡಿಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ ಕೊಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.