ಮೇಕೇದಾಟು ಯೋಜನೆ ತ್ವರಿತ ಅನುಷ್ಠಾನ ಸಂಬಂಧ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ 30 ಮಂದಿ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನ.18ರಂದು ನಡೆದ ಸಭೆಯಲ್ಲಿ ಅಡೆತಡೆ ಇಲ್ಲದೆ ತ್ವರಿತ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು
ಸುವರ್ಣ ವಿಧಾನಸೌಧ : ಮೇಕೇದಾಟು ಯೋಜನೆ ತ್ವರಿತ ಅನುಷ್ಠಾನ ಸಂಬಂಧ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ 30 ಮಂದಿ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನ.18ರಂದು ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆಯನ್ನು ಯಾವುದೇ ಅಡೆತಡೆ ಇಲ್ಲದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಒಂದು ಪ್ರತ್ಯೇಕ ಮುಖ್ಯ ಎಂಜಿನಿಯರ್ ಹಾಗೂ ಸಿಬ್ಬಂದಿ ಒಳಗೊಂಡಂತೆ ಹೊಸ ವಲಯ ಕಚೇರಿ ಮತ್ತು ಅಧೀಕ್ಷಕ ಎಂಜಿನಿಯರ್ ಹಾಗೂ ಸಿಬ್ಬಂದಿ ಒಳಗೊಂಡಂತೆ ಹೊಸ ವೃತ್ತ ಕಚೇರಿ ಸೃಜಿಸಿ ಕಾರ್ಯನಿರ್ವಹಿಸಲು ಸೂಕ್ತ ಕ್ರಮವಹಿಸುವಂತೆ ನಿರ್ಣಯಿಸಲಾಗಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮ ನಿಯಮಿತದ (ಕೆಎನ್‌ಎನ್‌ಎನ್) ವ್ಯವಸ್ಥಾಪಕ ನಿರ್ದೇಶಕರು ಡಿ.12ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಅನುಮತಿ ಪಡೆಯುವುದು ಅಗತ್ಯ
ಹೊಸದಾಗಿ ಕಚೇರಿ ಸ್ಥಾಪಿಸಿ, ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಅನುಮತಿ ಪಡೆಯುವುದು ಅಗತ್ಯ. ಈ ಪ್ರಕ್ರಿಯೆಗೆ ಸಮಯಾವಕಾಶ ಬೇಕಾಗಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಮೊದಲ ಹಂತದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಯೋಜನೆ ಕಾರ್ಯಭಾರವನ್ನು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ(ಕೆಇಆರ್‌ಎಸ್) ನಿರ್ದೇಶಕರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಅದರಂತೆ ಕೆಇಎಆರ್‌ಎಸ್ ಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ಪೈಕಿ 30 ಮಂದಿ ಒಳಗೊಂಡ ಒಂದು ತಂಡ ರಚಿಸಿಕೊಂಡು ಈ ತಂಡಕ್ಕೆ ಹೆಚ್ಚುವರಿಯಾಗಿ ಮೇಕೆದಾಟು ಯೋಜನೆ ಕೆಲಸ, ಕಾರ್ಯ ಹಂಚಿಕೆ ಮಾಡಲಾಗಿದೆ. ಈ ತಂಡದ ನಿರ್ವಹಣೆ ಅಧಿಕಾರ ಕೆಇಆರ್‌ಎಸ್ ನಿರ್ದೇಶಕರಿಗೆ ವಹಿಸಲಾಗಿದೆ. ಈ ತಂಡ ರಾಮನಗರದಲ್ಲಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಅಗತ್ಯ ಕಟ್ಟಡದ ವ್ಯವಸ್ಥೆ ಮಾಡಲು ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.
ಕಚೇರಿ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಹಾಗೂ ಇತರೆ ವೆಚ್ಚಗಳನ್ನು ಕಾವೇರಿ ನೀರಾವರಿ ನಿಗಮಕ್ಕೆ ಹಂಚಿಕೆ ಮಾಡಲಾದ ಅನುದಾನದಿಂದ ಭರಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಮೇಕೇದಾಟು ಯೋಜನೆ ಅನುಷ್ಠಾನ ಸಂಬಂಧ ಎಲ್ಲಾ ಕಡತಗಳು, ಪತ್ರ ವ್ಯವಹಾರಗಳು ಹಾಗೂ ಇನ್ನಿತರ ದಾಖಲೆಗಳನ್ನು ಕೆಇಆರ್‌ಎಸ್ ನಿರ್ದೇಶಕರಿಗೆ ಹಸ್ತಾಂತರಿಸಲು ಸಂಬಂಧಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.
ತಂಡದಲ್ಲಿ ಇರುವವರು ಯಾರು?
ಓರ್ವ ಕಾರ್ಯಪಾಲಕ ಇಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಸಹಾಯಕ ಇಂಜಿನಿಯರ್, ಓರ್ವ ಸಹಾಯಕ ಆಡಳಿತಾಧಿಕಾರಿ, ಓರ್ವ ಲೆಕ್ಕಾಧೀಕ್ಷಕರು, ಅಧೀಕ್ಷಕರು, ಪ್ರಥಮ ದರ್ಜೆ ಲೆಕ್ಕ ಸಹಾಯಕರು, ಇಬ್ಬರು ಪ್ರಥಮ ದರ್ಜೆ ಸಹಾಯಕರು, ಓರ್ವ ದ್ವಿತಿಯ ದರ್ಜೆ ಲೆಕ್ಕ ಸಹಾಯಕರು, ನಾಲ್ವರು ದ್ವಿತೀಯ ದರ್ಜೆ ಸಹಾಯಕರು, ಓರ್ವ ಶೀಘ್ರಲಿಪಿಗಾರರು, ನಾಲ್ವರು ಬೆರಳಚ್ಚುಗಾರರು, ಓರ್ವ ವಾಹನ ಚಾಲಕರ, ಇಬ್ಬರು ಗ್ರೂಪ್ ಡಿ ಸಿಬ್ಬಂದಿ ಹಾಗೂ ಓರ್ವ ಕಾವಲುಗಾರ ಈ ತಂಡದಲ್ಲಿದ್ದಾರೆ.
