ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಎಫ್‌ಆರ್‌ಪಿ ನಿಗದಿಪಡಿಸುವಲೂ ಕೇಂದ್ರ ಸರ್ಕಾರ ವಂಚನೆ ಮಾಡುತ್ತಿದೆ. ಸಕ್ಕರೆ ಇಳುವರಿ ಕಡಿಮೆ ತೋರಿಸಿ ಎಫ್‌ಆರ್‌ಪಿ ಆಧಾರದ ಮೇಲೆ ನಿಗದಿಪಡಿಸುತ್ತಿದ್ದಾರೆ. ಇದರಲ್ಲಿ ಮೋದಿಯವರ ಮೋಸ ಜನರಿಗೆ ಅರಿವಾಗಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯ ಸರ್ಕಾರ ಪ್ರಾದೇಶಿಕ ತಾರತಮ್ಮ ಮಾಡಿ ಜಿಲ್ಲಾ ಹಾಗೂ ರಾಜ್ಯ ಕಬ್ಬು ಬೆಳೆಗಾರ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್ ಭರತ್ ರಾಜ್ ಆರೋಪಿಸಿದರು.

ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಡೆದ ಕಬ್ಬು ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು 3,200 ರು. ಹಾಗೂ 3,300 ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಈ ಬೆಲೆ ನೀತಿ ಅನುಸರಿಸದೇ ಕೇವಲ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗೆ ಸೀಮಿತ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಎಫ್‌ಆರ್‌ಪಿ ನಿಗದಿಪಡಿಸುವಲೂ ಕೇಂದ್ರ ಸರ್ಕಾರ ವಂಚನೆ ಮಾಡುತ್ತಿದೆ. ಸಕ್ಕರೆ ಇಳುವರಿ ಕಡಿಮೆ ತೋರಿಸಿ ಎಫ್‌ಆರ್‌ಪಿ ಆಧಾರದ ಮೇಲೆ ನಿಗದಿಪಡಿಸುತ್ತಿದ್ದಾರೆ. ಇದರಲ್ಲಿ ಮೋದಿಯವರ ಮೋಸ ಜನರಿಗೆ ಅರಿವಾಗಬೇಕು ಎಂದರು.

ಒಂದು ಪರ್ಸೆಂಟ್ ಹೆಚ್ಚಾದರೆ 346 ರು.ಗಳನ್ನು ಎಫ್‌ಆರ್‌ಪಿ ಜೊತೆಗೆ ನೀಡಬೇಕು. ಆ ಕಾರಣದಿಂದಾಗಿ ಸಕ್ಕರೆ ಇಳುವರಿ ಪ್ರಮಾಣವನ್ನೇ ಕಡಿಮೆ ಮಾಡುವಂತಹ ಯತ್ನ ಸರ್ಕಾರಗಳು ಹಾಗೂ ಕಾರ್ಖಾನೆಗಳು ಸಹ ಮಾಡುತ್ತೇವೆ. ಹಾಗಾಗಿ 9.5 ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ ಕೇಂದ್ರ ಸರ್ಕಾರ 5,500 ರು. ಬೆಲೆಯನ್ನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ದೇಶದ ಹರಿಯಾಣ 850, ಪಂಜಾಬ್ 860, ಉತ್ತರ ಪ್ರದೇಶ 750, ತಮಿಳುನಾಡು 349 ಎಸ್‌ಎಪಿ ನೀಡುತ್ತಿದೆ. ಈ ರಾಜ್ಯಗಳ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ 500 ಎಸ್‌ಎಪಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

2022-23 ರಲ್ಲಿ ನಿಗದಿ ಮಾಡಿದ್ದ ಟನ್‌ಗೆ 150 ರು.ಗಳ ಬಾಕಿಯನ್ನು ಶೀಘ್ರ ನೀಡಬೇಕು. ಅಲ್ಲದೇ, 2023-2024-2025ನೇ ಸಾಲಿಗೆ ಎಸ್‌ಎಪಿ ನಿಗದಿಪಡಿಸಿ ತಕ್ಷಣ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದರು.

ದಕ್ಷಿಣ ಕರ್ನಾಟಕ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಬಹಳ ಅನ್ಯಾಯವಾಗುತ್ತಿದೆ. ಕಟಾವು ಮತ್ತು ಸಾಗಾಣಿಕೆ ವೆಚ್ಚ 900 ರಿಂದ 1300 ರವರೆಗೆ ಖರ್ಚು ಬರುತ್ತಿದೆ. ಬೆಳಗಾಂ ಕಬ್ಬಿನ ದರಕ್ಕೂ ನಮಗೂ 1000 ದಷ್ಟು ನಷ್ಟ ಆಗುತ್ತಿದೆ. ಹಾಗಾಗಿ ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಕೊಟ್ಟು ನಮಗೂ 3,300 ರು. ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳ ಆಯ್ಕೆ:

ರಾಜ್ಯ ಕಬ್ಬು ಬೆಳೆಗಾರರ ಸಂಘದ ಮಹದೇವಪುರ ವಲಯದ ಪದಾಧಿಕಾರಿಗಳ ಆಯ್ಕೆ ನಡೆದು ಗೌರವ ಅಧ್ಯಕ್ಷರಾಗಿ ನಂಜೇಗೌಡ ಹಾಗೂ ಚುಂಚೆಗೌಡ, ಅಧ್ಯಕ್ಷರಾಗಿ ಬಿ.ರಾಮಚಂದ್ರ, ಉಪಾಧ್ಯಕ್ಷರಾಗಿ ನಾಗೇಂದ್ರ, ಚನ್ನಹಳ್ಳಿ ನಿಂಗೇಗೌಡ, ಕಾರ್ಯದರ್ಶಿಯಾಗಿ ರವಿಕುಮಾರ್ ಎಂ.ಸಿ, ಸಹ ಕಾರ್ಯದರ್ಶಿಯಾಗಿ ರಾಜು, ಶಿವಕುಮಾರ್, ಸಮಿತಿ ಸದಸ್ಯರಾಗಿ ಸತೀಶ್, ಚಂದ್ರಶೇಖರ್, ಜಿ.ಮಾದೇಗೌಡ, ಜವನೇಗೌಡ, ಪ್ರಸನ್ನ, ಅಬ್ದೂಲ್ ಸುಕೂರ್, ಪುಟ್ಟಸ್ವಾಮಿ, ಕೇಬಲ್ ಜವನೇಗೌಡ, ರಾಮಕೃಷ್ಣಪ್ಪ, ಎಂ.ಬಿ. ಪುಟ್ಟಸ್ವಾಮಿ, ಪಟೇಲ್ ಶಿವರಾಮೇಗೌಡ, ಎಸ್ ನಾಗರಾಜ್, ಎಂ.ಜೆ ಮಹೇಶ್ ಅವರು ಆಯ್ಕೆಯಾದರು.

ವೇದಿಕೆಯಲ್ಲಿ ನಂಜೇಗೌಡ, ಚುಂಚೇಗೌಡ, ರಾಮಕೃಷ್ಣಪ್ಪ, ಅಬ್ದುಲ್ ಸುಕೂರ್, ರಾಮಚಂದ್ರ, ರವಿಕುಮಾರ್, ರಾಜು, ಶಿವಕುಮಾರ್, ನಿಂಗೇಗೌಡ ಸೇರಿದಂತೆ ಇತರರು ಇದ್ದರು.