ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ 2015-25 ಅವಧಿಯಲ್ಲಿ 50 ಸಾವಿರ ಕೋಟಿ ಲಪಟಾಯಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ಅವರು ಮಾಡಿದ ಆರೋಪ ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ವಿಧಾನ ಪರಿಷತ್ : ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ 2015-25 ಅವಧಿಯಲ್ಲಿ 50 ಸಾವಿರ ಕೋಟಿ ಲಪಟಾಯಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ಅವರು ಮಾಡಿದ ಆರೋಪ ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಆರೋಪ ಮಾಡಿದ ಶಾಸಕರು,‘ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಹಣ ಬಳಕೆ ಸಂಬಂಧ ವಿಶೇಷ ಗ್ರಾಮ ಸಭೆಗಳನ್ನು ಈವರೆಗೆ ಯಾಕೆ ನಡೆಸಿಲ್ಲ. ಗ್ರಾಮೀಣ ಭಾಗದ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಹಣ ಬರುತ್ತಿದ್ದರೂ ಸಹ ಸರಿಯಾಗಿ ಬಳಕೆಯಾಗುತ್ತಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 50 ಸಾವಿರ ಕೋಟಿ ರು. ಲಪಟಾಯಿಸಿರಬಹುದು ಎಂಬುದು ತಮ್ಮ ಅನಿಸಿಕೆಯಾಗಿದೆ’ ಎಂದು ಆರೋಪಿಸಿದರು.
ಆರೋಪ ಬಳಿಕ ಎಚ್ಚೆತ್ತ ವಿಪಕ್ಷ ಬಿಜೆಪಿ:
ಈ ಮಾತಿಗೆ ಎದ್ದು ನಿಂತ ಪ್ರತಿಪಕ್ಷದ ನಾಯಕ ಛಲವಾದ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಸದಸ್ಯರು, ಆಡಳಿತ ಪಕ್ಷದ ಸದಸ್ಯರೇ ಗಂಭೀರವಾದ ವಿಷಯ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಚರ್ಚೆಗೆ ಅವಕಾಶ ಕೊಡಬಾರದು ಎಂದು ಆಗ್ರಹ
ಇದಕ್ಕೆ ಸಭಾನಾಯಕ ಎನ್.ಎಸ್. ಬೋಸರಾಜು, ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಐವನ್ ಡಿಸೋಜಾ ಸೇರಿದಂತೆ ಹಲವು ಸದಸ್ಯರು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು. ಕೊನೆಗೆ ಸಭಾಪತಿ ಹೊರಟ್ಟಿ ಅವರು ಈ ಬಗ್ಗೆ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಪ್ರಸ್ತಾವನೆ ಸಲ್ಲಿಸುವಂತೆ ಜಕ್ಕಪ್ಪನವರ್ ಅವರಿಗೆ ಸೂಚಿಸಿದರು.
