ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಂಗಳವಾರ ಗ್ರಾಮ ಪಂಚಾಯಿತಿಯ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು.

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಂಗಳವಾರ ಗ್ರಾಮ ಪಂಚಾಯಿತಿಯ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾ.ಪಂ. ಇಒ ಭವಾನಿ ಶಂಕರ್, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಶ್ರವಣ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗು ಅಂಗನವಾಡಿ ಕಾರ್ಯಕರ್ತೆಯರು, ಗ್ರಾ,ಪಂ. ಸದಸ್ಯರು ಉಪಸ್ಥಿತರಿದ್ದರು. ಪ.ಜಾತಿ.,ಪ.ಪಂ.ದ ನಾಲ್ವರು ವಿದ್ಯಾರ್ಥಿಗಳಿಗೆ ಗ್ರಾ.ಪಂ. ವತಿಯಿಂದ ಪ್ರೋತ್ಸಾಹ ಧನ ಹಾಗೂ 13 ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಲಾಯಿತು.

ಉಜಿರೆ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದ್ದು ಮುಂದೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರವೀಣ್ ಫರ್ನಾಂಡಿಸ್ ಹೇಳಿದರು. ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಜನರ ಅಭಿಪ್ರಾಯ ಸಂಗ್ರಹಿಸಿ, ವಿಶೇಷ ಗ್ರಾಮಸಭೆ ಕರೆಯುವ ಮೂಲಕ ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.ಉಜಿರೆ ದ್ವಾರದಿಂದ ಬೆಳಾಲು ಕ್ರಾಸ್ ವರೆಗಿನ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥ ಜಗದೀಶ್ ಪ್ರಸಾದ್ ಹೇಳಿದರು. ಗ್ರಾ ಪಂ ನಲ್ಲಿ ಮನೆ ತೆರಿಗೆ, ಭೂಮಿ ತೆರಿಗೆ ಪಾವತಿಸದವರಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥ ಬಾಲಸುಬ್ರಹ್ಮಣ್ಯ ಭಟ್ ಬೊಳಂಬಿ ಆರೋಪಿಸಿದರು.

ಡಿ‌. 25ರ ಒಳಗೆ ಅಧಿಕೃತ 94ಸಿ ಕಡತಗಳ ವಿಲೇವಾರಿ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು. ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮ ಸಭೆಗಳು ನಡೆಯುತ್ತಿದೆ . ಆದರೆ ಹೆಚ್ಚಿನ ಇಲಾಖಾಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಸಭೆಯಲ್ಲಿ ಗ್ರಾಮಸ್ಥರು ಹೇಳಿದಾಗ ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಬಿಡುವು ಮಾಡಿಕೊಂಡು ಭಾಗವಹಿಸಬೇಕು ಎಂದು ಮೇಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕರು ಪ್ರತಿಕ್ರಿಯಿಸಿದರು.

ಗ್ರಾಮೀಣ ಪ್ರದೇಶದ ಸಮಸ್ಯೆಗಳ ಕುರಿತು ತಾಲೂಕು ಮಟ್ಟದಲ್ಲಿ ೧೫ ದಿನಗಳಿಗೊಮ್ಮೆ ಪರಿಶೀಲನೆ ನಡೆಸಿ ೪೮ ಗ್ರಾಮಗಳ ಸಮಸ್ಯೆಗಳನ್ನೂ ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಫಸಲ್ ಬಿಮಾ ಯೋಜನೆಯನ್ವಯ ತಾಲೂಕಿನ ಜನರಿಗೆ ರೂ 100-130 ಕೋಟಿ ರು. ಬೆಳೆ ವಿಮೆ ಖಾತೆಗೆ ಜಮೆಯಾಗಿದ್ದು ಅದು ಜಿಲ್ಲೆಯಲ್ಲೇ ಅತಿ ಹೆಚ್ಚು ಪರಿಹಾರ ವಿತರಿಸಿದಂತಾಗಿದೆ. ಕಾಳುಮೆಣಸು ಬೆಳೆಗಾರರಿಗೆ ಒಂದೆರಡು ದಿನದಲ್ಲಿ ಬೆಳೆ ವಿಮೆ ಜಮೆಯಾಗಲಿದೆ ಎಂದು ಶಾಸಕರು ತಿಳಿಸಿದರು.