ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಜರುಗಿತು. ಗ್ರಾಮಸ್ಥ ಕೆ.ಪಿ. ಮುತ್ತಪ್ಪ ಸಲಹೆ ನೀಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಡಿತರ ತೆಗೆದುಕೊಳ್ಳಲು ಸರ್ವರ್ ಸಮಸ್ಯೆ ಇರುವುದರಿಂದ ನ್ಯಾಯ ಬೆಲೆ ಅಂಗಡಿಯಲ್ಲಿ ಸೂಕ್ತ ಸಮಯದಲ್ಲಿ ನಾಗರಿಕರಿಗೆ ಪಡಿತರ ಪಡೆಯಲಾಗುತ್ತಿಲ್ಲ. ಹಾಗಾಗಿ ಹಾಲಿ ಗ್ರಾಮ ಒನ್ ಕೇಂದ್ರದಲ್ಲಿ ಹಾಲಿ ಇರುವ ಬೆರಳಚ್ಚು ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಗ್ರಾಮಸ್ಥರಾದ ಕೆ.ಪಿ. ಮುತ್ತಪ್ಪ ಸಲಹೆ ನೀಡಿದರು.ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.ಕಬ್ಬಿಣ ಸೇತುವೆ ಕಾಮಗಾರಿ ಆರಂಭವಾಗಿರುವುದರಿಂದ ಪರ್ಯಾಯ ರಸ್ತೆಯಲ್ಲಿ ಎಲ್ಲ ವಾಹನಗಳು ಸಂಚರಿಸಬೇಕಾಗಿರುವುದರಿಂದ ರಸ್ತೆಗೆ ಹೊಂದಿಕೊಂಡಿರುವಂತಹ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈಗಾಗಲೇ ಗ್ರಾಮ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಬಿಲ್‌ಗಳು ಕೂಡ ಪಾವತಿಯಾಗಿದೆ. ಆದರೆ ಕೊಳವೆ ಬಾವಿಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆ.ಪಿ.ಮುತ್ತಪ್ಪ ಹೇಳಿದರು. ಈ ಕುರಿತು ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಕಂತಳ್ಳಿ ಹಾಡಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಮೂಲಭೂತ ಸೌಕರ‍್ಯಗಳು ದೊರೆಯುತ್ತಿಲ್ಲ. ಅವರಿಗೆ ಜಾತಿ ದೃಢೀಕರಣ ಪ್ರಮಾಣ ಪತ್ರ ಕೂಡ ದೊರೆಯುತ್ತಿಲ್ಲ. ಕಂತಳ್ಳಿಯಲ್ಲಿ ಈಗಾಗಲೇ 20 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಉಳಿಕೆ ಕಾಮಗಾರಿ ಮಾಡದೇ ಇರುವುದರಿಂದ ಈಗಲೂ ಮಳೆ ಬಂದರೆ 8-10 ಹಾಡಿ ನಿವಾಸಿಗಳು ಕೆಸರಿನಲ್ಲೇ ಓಡಾಡಬೇಕಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಕೆ.ಪಿ.ದಿನೇಶ್ ಹೇಳಿದರು. ಈ ಸಂದರ್ಭ ಗ್ರಾಮಸ್ಥರಾದ ಮಚ್ಚಂಡ ಪ್ರಕಾಶ್ ಅವರು ಆಕ್ಷೇಪಣೆ ವ್ಯಕ್ತಪಡಿಸಿ ಇದೆಲ್ಲಾ ಕೇಳಲು ನಿಮಗೇನು ಅಧಿಕಾರವಿದೆ, ಸಂಬಂಧಪಟ್ಟವರು ವಿಚಾರಿಸಿಕೊಳ್ಳುತ್ತಾರೆ ಎಂದು ಮಧ್ಯಪ್ರವೇಶಿಸಿ ಹೇಳಿದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭ ನೋಡಲ್ ಅಧಿಕಾರಿ, ಪಿಡಿಒ ಜಾಣ ಮೌನವಹಿಸಿದರು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಮೀನುಗಾರಿಕಾ ಇಲಾಖೆಯವರು ಹಾರಂಗಿ ಹಿನ್ನೀರಿನ ಪ್ರದೇಶಗಳಲ್ಲಿ ಮೀನು ಹಿಡಿಯಲು ಟೆಂಡರ್ ತೆಗೆದು ಹೊರಗಿನವರಿಗೆ ಗುತ್ತಿಗೆ ನೀಡುತ್ತಿದ್ದಾರೆ, ಐಗೂರು, ಯಡವಾರೆ, ಯಡವನಾಡು, ಹಾರಂಗಿ ವ್ಯಾಪ್ತಿಯ ನಿವಾಸಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದಾಗ, ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ದೃಢೀಕರಣ ಪತ್ರ ನೀಡುವುದಾಗಿ ಸಭೆಗೆ ತಿಳಿಸಿದರು. ಶಾಸಕರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ: ಗ್ರಾಮಸ್ಥರ ಆಕ್ರೋಶಸಭೆಯಲ್ಲಿ ಕ್ಷೇತ್ರದ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ, ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಕೆಲ ಗ್ರಾಮಸ್ಥರನ್ನು ಹೊರತುಪಡಿಸಿ, ಉಳಿದವರು ಶಾಸಕರ ಅಭಿವೃದ್ಧಿ ಕೆಲಸಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಮಸ್ಥರಾದ ಮೇಘನ್, ಜಯಪ್ರಕಾಶ್ ಅವರು ಶಾಸಕರು ಪಕ್ಷಾತೀತವಾಗಿ ಎಲ್ಲರ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ. ವೃಥಾ ಅವರನ್ನು ದೂರಬೇಡಿ, ಇದೇ ಪ್ರವೃತ್ತಿಯನ್ನು ಮುಂದುವರೆಸಿದ್ದಲ್ಲಿ ಪ್ರತಿಭಟಿಸಬೇಕಾಗುವುದು ಎಂದು ಬಹುತೇಕ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಗ್ರಾಮಸಭೆಯಲ್ಲಿ ಪ್ರಮುಖರಾದ ರಮೇಶ್, ಹೊನ್ನಪ್ಪ, ಜಯಪ್ರಕಾಶ್, ಹರಿದಾಸ್, ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒ ಪೂರ್ಣಕುಮಾರ್, ಉಪಾಧ್ಯಕ್ಷೆ ಗೌರಮ್ಮ, ಪಂಚಾಯಿತಿ ಸದಸ್ಯರು ಇದ್ದರು.