ಶಿವಾನಂದ ಪಿ.ಮಹಾಬಲಶೆಟ್ಟಿ
ಬಾಗಲಕೋಟ, ಬೆಳಗಾವಿ ಹಾಗೂ ಮಹಾರಾಷ್ಟ್ರ ಪ್ರದೇಶಗಳಿಗೆ ತೀರಾ ಸಮೀಪ ಮತ್ತು ರಬಕವಿ-ಬನಹಟ್ಟಿ ಹಾಗೂ ಅಥಣಿ ತಾಲೂಕುಗಳ ನಡುವಿನ ವಾಣಿಜ್ಯ ಕೊಂಡಿಯಾದ ರಬಕವಿ-ಮಹಿಷವಾಡಗಿ ಸೇತುವೆಯ ₹ 55 ಕೋಟಿ ವೆಚ್ಚದ ಮಹತ್ತರ ಯೋಜನೆಯಾಗಿದ್ದು, ಇದೀಗ ಕಾಂಗ್ರೆಸ್-ಬಿಜೆಪಿ ನಡುವಿನ ರಾಜಕೀಯ ವೇದಿಕೆಯಾಗಿ ಮಾರ್ಪಟ್ಟಿರುವುದು ತೀವ್ರ ಮುಜುಗರ ಅನುಭವಿಸುವಂತಾಗಿದೆ.
ರಬಕವಿ-ಮಹಿಷವಾಡಗಿ ಸೇತುವೆಯು ಅಥಣಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಮುಖ ಕೊಂಡಿಯಾಗಿದೆ. ಕಳೆದೊಂದು ವಾರದಿಂದ ಅತ್ಯಂತ ವೇಗವಾಗಿ ನದಿಯೊಳಗಿನ ಪಿಲ್ಲರ್ ಕಾರ್ಯ ಹಗಲಿರುಳು ನಡೆಯುತ್ತಿದೆ. ಹಗಲು-ರಾತ್ರಿ ಪ್ರಚಾರ: ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಮಧ್ಯೆ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಶೀತಲ ಸಮರ ನಡೆಯುತ್ತಿದೆ. ಹಗಲು-ರಾತ್ರಿ ಇದೇ ಸೇತುವೆ ಕಾಮಗಾರಿ ಸ್ಥಳದಲ್ಲಿ ಬಿಡಾರ ಹೂಡಿರುವ ಉಭಯ ಪಕ್ಷಗಳ ಮುಖಂಡರು ಹೇಳಿಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಅತ್ತ ಗುತ್ತಿಗೆದಾರ, ಅಭಿಯಂತರರು ಹಾಗೂ ಕಾರ್ಮಿಕರು ಪಿಲ್ಲರ್ ನಂ.8ರ ಬುನಾದಿ ಭದ್ರಗೊಳಿಸಿದ್ದಲ್ಲದೇ ಮೂರು ಹಂತಗಳನ್ನು ಕಾಂಕ್ರೀಟ್‌ಗೊಳಿಸಿದ ಹುರುಪಿನಲ್ಲಿದ್ದು, ಇದೀಗ ಮಂಗಳವಾರ ಮಧ್ಯಾಹ್ನ ಪಿಲ್ಲರ್ ನಂ.7ರ ಸುತ್ತಲಿನ ನೀರು ಹೊರಹಾಕಿ, ಬುನಾದಿ ಪುನಃ ಭದ್ರಗೊಳಿಸಿದ್ದಲ್ಲದೇ ಕಾಂಕ್ರೀಟ ಹಾಕುವ ಕೆಲಸ ಮಾಡುತ್ತಿದ್ದಾರೆ.ಸೋಮವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಶಾಸಕ ಸಿದ್ದು ಸವದಿ ಗುತ್ತಿಗೆದಾರನಿಗೆ ಮಹಾ ನೀರು ಒಂದು ವಾರದಲ್ಲಿ ನದಿಗೆ ಬರುವ ನಿರೀಕ್ಷೆಯಿದ್ದು, ಪಿಲ್ಲರ್.ನಂ.7ರ ಕೆಲಸ ತೀವ್ರಗೊಳಿಸಿ ಮುಕ್ತಾಗೊಳಿಸಲು ತಾಕೀತು ನೀಡಿದ್ದರು. ಬಿಜೆಪಿ ಮುಖಂಡರು ಸೇತುವೆ ಕಾರ್ಯ ವೀಕ್ಷಣೆ ನಂತರ ತಮ್ಮ ಹೇಳಿಕೆಗಳನ್ನು ನೀಡಿದರೆ ಮತ್ತೊಂದು ಸುತ್ತು ಕಾಂಗ್ರೆಸ್ ಮುಖಂಡರು ಇದೇ ಸೇತುವೆ ಕಾಮಗಾರಿ ಸ್ಥಳದಲ್ಲಿ ನೀಡುವ ಹೇಳಿಕೆಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ.
ಒಂದು ವಾರದ ಕಾಲಾವಕಾಶ:
ರಬಕವಿ, ಮಹಿಷವಾಡಗಿ ಜನತೆ ಫುಲ್ ಖುಷ್: ಸೇತುವೆ ನಿರ್ಮಾಣಕ್ಕೆ ಇದೀಗ ರಾಜಕೀಯ ತಿರುವು ಪಡೆದುಕೊಂಡು ಕಾಮಗಾರಿ ವೇಗ ಪಡೆದುಕೊಂಡಿದ್ದರೆ, ಸೇತುವೆ ಕಾರ್ಯ ಮುಂದಿನ ವರ್ಷ ಬಹುತೇಕ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನಲೆಯಲ್ಲಿ ರಬಕವಿ ಮತ್ತು ಮಹಿಷವಾಡಗಿ ಸುತ್ತಲಿನ ಜನತೆ ಖುಷ್ ಆಗಿದ್ದಾರೆ. ತಾಲೂಕಿನ ಜನತೆ ಮಾತ್ರ ಸಂತಸದಿಂದ ದಿನಂಪ್ರತಿ ಸೇತುವೆ ಕಾರ್ಯ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸುತ್ತಿರುವುದು ನಿತ್ಯದ ದೃಶ್ಯವಾಗಿದೆ.