ಮತದಾರರಿಗೆ ಆತ್ಮವಿಶ್ವಾಸ ಮೂಡಿಸಲು ಪಥಸಂಚಲನ

KannadaprabhaNewsNetwork | Published : Mar 24, 2024 1:31 AM

ಸಾರಾಂಶ

ಮತದಾನದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಬೇಕು. ನಿಷ್ಪಕ್ಷಪಾತ ಚುನಾವಣೆಗೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಯಾವುದೇ ದುಷ್ಕೃತ್ಯ ನಡೆಯದಂತೆ ತಡೆಗಟ್ಟಲು ಪೊಲೀಸರು ಸನ್ನದ್ಧ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಲೋಕಸಭಾ ಚುನಾವಣೆ ಸಂಬಂಧ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಶನಿವಾರ ಪೊಲೀಸರು ವಿವಿಧ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.

ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪಥಸಂಚಲ ಬಿ.ಆರ್.ಅಂಬೇಡ್ಕರ್ ಸರ್ಕಲ್‌,ಬಿಬಿ ರಸ್ತೆ, ಸರ್.ಎಂ.ವಿ. ಸರ್ಕಲ್‌,ಬಜಾರ್‌ ರಸ್ತೆ, ಭುವನೇಶ್ವರಿ ವೃತ್ತ,ಗಂಗಮ್ಮ ಗುಡಿ ರಸ್ತೆ,ಎಂಜಿ ರಸ್ತೆ, ಎಪಿಎಂಸಿ ಯಾರ್ಡ್, ಪ್ರಶಾಂತನಗರ, ವಾಪಸಂದ್ರ ದಲ್ಲಿ ಸಂಚರಿಸಿ, ಮತ್ತೆ ವಾಪಸ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕೊನೆಗೊಂಡಿತು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ಮತ್ತು ಗ್ರಾಮಾಂತರ, ಸಂಚಾರಿ ಪೋಲಿಸರು,ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬ್ಯಾಂಡ್ ಸೆಟ್ ತಂಡ, ಉಪ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.ನಿರ್ಭಯದಿಂದ ಮತ ಹಾಕಿ

ಪೊಲೀಸ್‌ ಉಪಾಧೀಕ್ಷಕ ಎಸ್.ಶಿವಕುಮಾರ್ ಮಾತನಾಡಿ,2024ರ ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಂದು ನಿರ್ಭಯವಾಗಿ, ಧರ್ಮ, ಜನಾಂಗ, ಜಾತಿ, ಮತ, ಭಾಷೆ, ಪ್ರಾದೇಶಿಕತೆ ಸೇರಿದಂತೆ ಯಾವುದೇ ಇತರೆ ಪ್ರೇರಣೆಗಳಿಗೆ, ಆಮಿಷಗಳಿಗೆ ಪ್ರಭಾವಿತರಾಗದೆ ಮತ ಚಲಾಯಿಸಬೇಕು ಎಂದರು.

ಮತದಾನದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಬೇಕು. ನಿಷ್ಪಕ್ಷಪಾತ ಚುನಾವಣೆಗೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಪುಂಡ–ಪೋಕರಿ, ಕಿಡಿಗೇಡಿಗಳು ತಮ್ಮ ಯಾವುದೇ ತರಹದ ದುಷ್ಕೃತ್ಯ ನಡೆಸಲು ಸಾಧ್ಯವಿಲ್ಲ. ಜನರ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಪಥಸಂಚಲನ ನಡೆಸಿದ್ದೇವೆ ಎಂದರು.ಮತದಾನ ಎಲ್ಲರ ಹಕ್ಕು

ಮತದಾನ ಮಾಡುವುದು ನಮ್ಮ ನಿಮ್ಮೆಲ್ಲರ ಹಕ್ಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು. ತಪ್ಪದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ವರ್ಗದವರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಆ ಹಿನ್ನೆಲೆಯಲ್ಲಿ ಮತದಾನದ ಮಹತ್ವದ ಕುರಿತು ಜನರಿಗೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಪೋಲಿಸ್ ಇಲಾಖೆಯೂ ಕಾರ್ಯ ಪ್ರವೃತ್ತವಾಗಿದೆ ಎಂದು ಹೇಳಿದರು. ಪಥ ಸಂಚಲನದಲ್ಲಿ ಡಿಎಆರ್ ಡಿವೈಎಸ್ಪಿ ಪರಮೇಶ್,ಇನ್ಸ್ ಪೆಕ್ಟರ್ ಮಹದೇವ್, ಇನ್ಸ್ ಪೆಕ್ಟರ್ ಗಳಾದ ಮಂಜುನಾಥ್, ನಿರ್ಮಲ, ಸಬ್ ಇನ್ಸ್ ಪೆಕ್ಟರ್ ಗಳಾದ ಶರಣಪ್ಪ ,ನಾರಾಯಣಸ್ವಾಮಿ,ಮಂಜುಳ, ಎಂ.ಎನ್ .ಮಂಜುಳ, ನಾಗೇಂದ್ರ ಪ್ರಸಾದ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ಮತ್ತು ಗ್ರಾಮಾಂತರ, ಸಂಚಾರಿ ಪೋಲಿಸರು,ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬ್ಯಾಂಡ್ ಸೆಟ್ ತಂಡದವರು ಇದ್ದರು.

Share this article