ಕ್ಯಾಂಪ್ಕೊ ನಿಯೋಗ ಕೇಂದ್ರ ಸಚಿವರ ಭೇಟಿ ಯಶಸ್ವಿ

KannadaprabhaNewsNetwork |  
Published : Aug 10, 2026, 03:15 AM IST
ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಸಂಸದರ ನೇತೃತ್ವದ ಕ್ಯಾಂಪ್ಕೋ ನಿಯೋಗ | Kannada Prabha

ಸಾರಾಂಶ

ಅಡಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪದೊಂದಿಗೆ ಉನ್ನತ ಮಟ್ಟದ ಗಣ್ಯರ ನಿಯೋಗ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿತು.

ಮಂಗಳೂರು: ಅಡಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪದೊಂದಿಗೆ ಉನ್ನತ ಮಟ್ಟದ ಗಣ್ಯರ ನಿಯೋಗ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿತು. ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ಅಡಕೆ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಿಯೋಗ ಅಡಕೆ ವಲಯ ಪ್ರಸಕ್ತ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ವಿವರಿಸಿತು.

ಅಕ್ರಮ ಆಮದಿಗೆ ಕಡಿವಾಣ: ವಿವಿಧ ಎಚ್ಎಸ್ ಕೋಡ್‌ಗಳನ್ನು ಮರೆಮಾಚಿ ನಡೆಯುತ್ತಿರುವ ಅಡಕೆಯ ಅಕ್ರಮ ಆಮದು, ಕಳೆದ ಅಕ್ಟೋಬರ್‌ನಿಂದ ‘ಹುರಿದ ಅಡಕೆ’ ಎಂಬ ನೂತನ ವರ್ಗೀಕರಣದ ನೆಪದಲ್ಲಿ ದೇಶದೊಳಗೆ ನುಸುಳುತ್ತಿರುವ ಕಳಪೆ ಗುಣಮಟ್ಟದ ಅಡಕೆಯ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.ಧಾರಣೆ ಕುಸಿತದ ಆತಂಕ: ಕನಿಷ್ಠ ಆಮದು ಬೆಲೆ ನಿಯಮಗಳನ್ನು ಗಾಳಿಗೆ ತೂರಿ, ಸುಂಕ ರಹಿತವಾಗಿ ಅಗ್ಗದ ದರದಲ್ಲಿ ವಿದೇಶಿ ಅಡಕೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದರಿಂದ, ಅಡಕೆ ಧಾರಣೆಯಲ್ಲಿ ಉಂಟಾಗಿರುವ ದಿಢೀರ್ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

‘ಒಂದು ದೇಶ, ಒಂದು ತೆರಿಗೆ’ ಜಾರಿ: ಖಾಸಗಿ ವ್ಯಾಪಾರಿಗಳು ತೆರಿಗೆ ವಂಚಿಸುತ್ತಿರುವಾಗ, ಪ್ರಾಮಾಣಿಕವಾಗಿ ವಹಿವಾಟು ನಡೆಸುವ ಸಹಕಾರ ಸಂಘಗಳ ಮೇಲೆ ಬೀಳುತ್ತಿರುವ ಅನಗತ್ಯ ತೆರಿಗೆ ಹೊರೆಯನ್ನು ತಪ್ಪಿಸಲು, ‘ಒಂದು ದೇಶ ಒಂದು ತೆರಿಗೆ’ ನೀತಿ ಜಾರಿಗೊಳಿಸುವ ತುರ್ತು ಅಗತ್ಯವನ್ನು ಕ್ಯಾಂಪ್ಕೊ ಅಧ್ಯಕ್ಷರು ಪ್ರಬಲವಾಗಿ ಮಂಡಿಸಿದರು.ನಿಯೋಗದ ಮನವಿಗೆ ಸ್ಪಂದಿಸಿದ ಅಮಿತ್ ಶಾ ಅವರು, ಈ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ ಸಹಕಾರ ಕ್ಷೇತ್ರ ಹಾಗೂ ಅದರ ಸದಸ್ಯರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂಬ ಅಭಯವನ್ನೂ ನೀಡಿದರು.

ನಂತರ ನಿಯೋಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರೈತರು ಎದುರಿಸುತ್ತಿರುವ ತೆರಿಗೆಯ ಹೊರೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿತು.

ಮೈಲುತುತ್ತದ ಮೇಲಿನ ವಿಪರೀತ ಜಿಎಸ್‌ಟಿ: ಅಡಕೆ ತೋಟಗಳಿಗೆ ಬೋರ್ಡೋ ದ್ರಾವಣದಲ್ಲಿ ಬಳಸಲಾಗುವ ಮೈಲುತುತ್ತು ಮೇಲಿನ ಜಿಎಸ್‌ಟಿ ತಾರತಮ್ಯವನ್ನು ನಿಯೋಗ ಸಚಿವರ ಗಮನಕ್ಕೆ ತಂದಿತು. ಮೈಲುತುತ್ತವನ್ನು ಸೂಕ್ಷ್ಮ ಪೋಷಕಾಂಶವಾಗಿ ಬಳಸಿದಾಗ ಕೇವಲ ಶೇ.5 ಜಿಎಸ್‌ಟಿ ಇದ್ದರೆ, ಅದೇ ರೈತರು ಅದನ್ನು ಶಿಲೀಂಧ್ರನಾಶಕವಾಗಿ ಬಳಸುವಾಗ ಬರೋಬ್ಬರಿ ಶೇ.18 ಜಿಎಸ್‌ಟಿ ಪಾವತಿಸಬೇಕಾದ ಈ ಅನ್ಯಾಯವನ್ನು ನಿವಾರಿಸಬೇಕು ಎಂದು ಒತ್ತಾಯಿಸಲಾಯಿತು.

ವಿಷಯವನ್ನು ಆಲಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅಕ್ರಮ ಮಾರ್ಗಗಳ ಮೂಲಕ ನಡೆಯುತ್ತಿರುವ ಆಮದಿನ ಮೇಲೆ ಈಗಾಗಲೇ ಹದ್ದಿನ ಕಣ್ಣಿಡಲಾಗಿದ್ದು, ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಎಲ್ಲ ಬಂದರುಗಳಿಗೆ ಕಟ್ಟೆಚ್ಚರದ ಸೂಚನೆ ನೀಡಲಾಗಿದೆ ಎಂದರು.

ಕ್ಯಾಂಪ್ಕೊ ತನ್ನ ಸದಸ್ಯ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಇದೇ ಬದ್ಧತೆಯೊಂದಿಗೆ ಮುಂದಿನ ದಿನಗಳಲ್ಲೂ ಅವಿರತವಾಗಿ ಶ್ರಮಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿ ಎದೆಹಾಲು ಅಮೃತಕ್ಕೆ ಸಮಾನ
ಜನರ ಜೀವ ರಕ್ಷಣೆಯಲ್ಲಿ ವೈದ್ಯರ ಸೇವೆ ಸ್ಮರಣೀಯ