ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2025-26 ನೇ ಸಾಲಿನಲ್ಲಿ 92.54 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಗಂಗಾಧರ ರಾವ್ ಎಸ್ ಕೆವುಡೇಲು ಹೇಳಿದರು.
ಸದಸ್ಯರಿಂದ ರು. 151.75 ಲಕ್ಷ ಪಾಲು ಬಂಡವಾಳ, 41.37 ರು. ಕೋಟಿ ಠೇವಣಿ ಸಂಗ್ರಹಿಸಿ, 25 ಕೋಟಿ ರು. ಹೊರಬಾಕಿ ಸಾಲ ನೀಡಿ ಶೇ 99 ಸಾಲ ವಸೂಲಾತಿ ಮಾಡಲಾಗಿದೆ. ಸದಸ್ಯರಿಗೆ ಶೇ 15 ಡಿವಿಡೆಂಡ್ ನೀಡಲು ಸೊಸೈಟಿ ನಿರ್ಧರಿಸಿದೆ. ಸಂಘವು ಸದಸ್ಯರ ಪೂರ್ಣ ಸಹಕಾರದಿಂದ 13 ನೇ ವರ್ಷದಲ್ಲಿ ಉತ್ತಮ ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು. ಸಂಘವು ಆಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿ ಪಡೆದಿದ್ದು ನಿರ್ದೇಶಕರು ಹಾಗೂ ಸಿಬಂದಿ ವರ್ಗದ ಪ್ರಾಮಾಣಿಕ ಪರಿಶ್ರಮ ಸಂಘದ ಸಾಧನೆಗೆ ಕಾರಣವಾಗಿದೆ. ಸದಸ್ಯರು ತಮ್ಮ ಅವಶ್ಯಕತೆಗನುಗುಣವಾಗಿ ಕೃಷಿ ಚಟುವಟಿಕೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಸಂಘದ ಸಾಲದ ಪ್ರಯೋಜನ ಪಡೆದು ಕ್ಲಪ್ತ ಕಾಲದಲ್ಲಿ ಮರುಪಾವತಿಮಾಡಿ ಸಂಘದ ಏಳಿಗೆಗೆ ಸಹಕರಿಸಬೇಕು. ಮುಂದಿನ ವರ್ಷ ಸಂಘವು 1.2೦ ಕೋಟಿ ರು. ಲಾಭ ಗಳಿಸುವ ಗುರಿ ಹೊಂದಲಾಗಿದ್ದು ಎಲ್ಲರ ಪೂರ್ಣ ಸಹಕಾರ ಕೋರುತ್ತೇವೆ ಎಂದು ಗಂಗಾಧರ ರಾವ್ ಎಸ್ ಕೆವುಡೇಲು ನುಡಿದರು.
ಸಂಘದ ಸಲಹಾ ಸಮಿತಿ ಸದಸ್ಯ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜಪ್ರಸಾದ್ ಪೋಲ್ನಾಯ ಮಾತನಾಡಿ ಗ್ರಾಹಕರು ಬ್ಯಾಂಕಿನ ಮೇಲಿಟ್ಟ ವಿಶ್ವಾಸ,ಆಡಳಿತ ಮಂಡಳಿ ಹಾಗೂ ಸಿಬ್ಬದಿಗಳ ನಗುಮುಖದ ಸೇವೆ, ಕಾಳಜಿಯಿಂದ 92.50 ಲಕ್ಷ ರು. ಲಾಭ ಗಳಿಸಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುವುದು ಅಭಿನಂದನೀಯ. ಹರಿಹರಾನುಗ್ರಹ ಸಭಾಭವನಕ್ಕೆ ಮಾಡಲಾದ ಸಾಲ ತೀರಿಸಲು ಸಮಾಜಬಾಂಧವರ ಸಹಕಾರ ಕೋರುವುದರೊಂದಿಗೆ ಸಾರ್ವಜನಿಕರಿಗೆ ಸೊಸೈಟಿ ಮೇಲಿನ ವಿಶ್ವಾಸ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಆ 16ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭಾವನದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ಆಮಂತ್ರಿಸಿದರು. ಸದಸ್ಯರ ಪರವಾಗಿ ಎಸ್ ಆರ್ ಪಟವರ್ಧನ್, ತಿಲಕ್ ಕೋರ್ನ್ಗಿನ್ನಾಯ ,ಮುರಳಿಕೃಷ್ಣ ಆಚಾರ್, ಅನಂತಕೃಷ್ಣ ಆರ್ಮುಡತ್ತಾಯ, ಸುರೇಶ ಕುದ್ರೆನ್ತಾಯ, ಡಾ.ಕೆ.ಎಸ್ ಮೋಹನನಾರಾಯಣ, ಪರಾರಿ ವೆಂಕಟ್ರಮಣ ಹೆಬ್ಬಾರ್ ಸಂಘದ ಬೆಳವಣಿಗೆಗೆ ತಮ್ಮ ಅನಿಸಿಕೆ, ಅಭಿಪ್ರಾಯ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಭಟ್, ನಿರ್ದೇಶಕರಾದ ರಾಮ ಭಟ್ ಅಲೆವೂರಾಯ, ಲಕ್ಷ್ಮೀನಾರಾಯಣ ಭಟ್, ಗೋಪಾಲಕೃಷ್ಣ ಭಟ್, ಶ್ರೀಶ ಮುಚ್ಚಿನ್ನಾಯ, ಹೃಷಿಕೇಶ್ ಒಪ್ಪಂತಾಯ, ಶೋಭಾ ಸುರೇಶ ಮತ್ತು ವಿಜಯಾ ಎಚ್ ಪ್ರಸಾದ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗಂಗಾಧರ ರಾವ್ ಎಸ್ ಕೆವುಡೇಲು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ಜಿ.ಎಂ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಗೋಪಾಲಕೃಷ್ಣ ಭಟ್ ವಂದಿಸಿದರು.