ಹುಬ್ಬಳ್ಳಿ:
ವಿಪ ಸದಸ್ಯ ಸಿ.ಟಿ. ರವಿ ಅವರ ಹೇಳಿಕೆಯಿಂದಾಗಿ ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರವಾಗಿ ನೊಂದಿದ್ದಾರೆ. ಯಾರಾದರೂ ಈ ರೀತಿಯ ಆರೋಪವನ್ನು ತಮ್ಮ ಮೇಲೆ ತಾವೇ ಮಾಡಿಕೊಳ್ಳಲು ಸಾಧ್ಯವೇ? ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಬಳಸಿರುವ ಪದವನ್ನು ನಾನು ಖಂಡಿಸುತ್ತೇನೆ. ಭಾರತದ ಸಂಸ್ಕೃತಿಯಲ್ಲಿ ಈ ರೀತಿಯ ಪದ ಬಳಕೆ ಶೋಭೆ ತರುವುದಿಲ್ಲ. ಒಬ್ಬ ಮಹಿಳೆ ಮಾಡಿರುವ ಆರೋಪದ ವಿರುದ್ಧ ಬಿಜೆಪಿಗರು ಹೋರಾಟ ಮಾಡುತ್ತಿದ್ದಾರೆ. ಅದು ಸುಳ್ಳು ಆರೋಪ ಎಂದು ವಾದಿಸುತ್ತಿದ್ದಾರೆ. ಯಾರೂ ಈ ರೀತಿಯ ಆರೋಪವನ್ನು ತಮ್ಮ ಮೇಲೆ ತಾವೇ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದರು.
ಬೇರೇನೂ ಗೊತ್ತಿಲ್ಲ:ಬಿಜೆಪಿಯ ನೈತಿಕತೆ ಈ ವಿಚಾರದಲ್ಲಿ ಎದ್ದು ಕಾಣುತ್ತಿದೆ. ಕರ್ನಾಟಕ ಗೂಂಡಾ ರಾಜ್ಯ, ಪಾಕಿಸ್ತಾನ ಆಗಿದೆ ಎಂದು ಬೊಬ್ಬೆ ಹಾಕುವ ಬಿಜೆಪಿ ನಾಯಕರು ಇಂತಹ ಶಬ್ದವನ್ನು ಪ್ರಯೋಗಿಸಬಹುದೇ ಎಂದು ಪ್ರಶ್ನಿಸಿದರು?. ಅಲ್ಲದೆ, ಮುಸಲ್ಮಾನ, ಪಾಕಿಸ್ತಾನ, ಅಫ್ಘಾನಿಸ್ತಾನ ಬಿಟ್ಟರೆ ಇವರಿಗೆ ಬೇರೇನೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ಅವಾಚ್ಯ ಪದ ಬಳಕೆ ಸರಿಯಲ್ಲ:ರವಿ ವಿರುದ್ಧ ಕೊಲೆಯ ಆರೋಪ ಮಾಡಿದಾಗ ದೂರು ಕೊಡಲಿ. ಅದನ್ನು ಬಿಟ್ಟು ಅವಾಚ್ಯ ಶಬ್ದಗಳ ಪ್ರಯೋಗ ಮಾಡುವುದು ಸರಿಯಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಯಾವ ಮಹಿಳೆ ಬಗ್ಗೆ ಗೌರವ ಇಟ್ಟಿದೆ?. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪಾರ್ಲಿಮೆಂಟ್ ನೂತನ ಕಟ್ಟಡಕ್ಕೆ ಏಕೆ ಕರೆದುಕೊಂಡು ಹೋಗಲಿಲ್ಲ? ಎಂದ ಅವರು, ಶ್ರೀರಾಮಮಂದಿರ ಪೂಜೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಗೆ ಬಿಟ್ಟರು? ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರು ಯಾವಾಗಲೂ ಅನಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದರು. 45 ಲಕ್ಷ ಸಾವಿನ ಹೊಣೆ ಮೋದಿ ಹೊರುತ್ತಾರೆಯೆ?
ಬಳ್ಳಾರಿ ಬಾಣಂತಿಯರ ಸಾವು ಪ್ರಕರಣಕ್ಕೆ ಸರ್ಕಾರವೇ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಲಾಡ್, ಈ ಕುರಿತು ಈಗಾಗಲೇ ಎರಡೂ ಸದನಗಳಲ್ಲಿ ಸುದೀರ್ಘ ಚರ್ಚೆಯಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಆರೋಗ್ಯ ಸಚಿವರು ಸಮರ್ಪಕ ಉತ್ತರ ನೀಡಿದ್ದಾರೆ. ಆದರೆ, ನೀವೇ ಕಾರಣ, ನೀವೇ ಕೊಲೆಗಾರರು ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಹಾಗಾದರೆ ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ 45 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದರು. ಹಾಗಾದರೆ ಈ ಸಾವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಹೊರುತ್ತಾರೆಯೇ?. ಈ ಸಾವುಗಳ ಬಗ್ಗೆ ಒಂದು ದಿನವೂ ಚರ್ಚೆಯಾಗಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ಕಡೆ ಒಂದೇ ಒಂದು ಸಣ್ಣ ಘಟನೆ ನಡೆದರೂ ಮುಗಿಬಿದ್ದು ಬೈಯುತ್ತಾರೆ. ಇದು ಬಿಟ್ಟರೆ ಬಿಜೆಪಿಯವರಿಗೆ ಬೇರೇನು ಗೊತ್ತಿಲ್ಲ ಎಂದು ಹರಿಹಾಯ್ದರು.