ಜಮೀನಿಗೆ ನೀರುಣಿಸುವ ಸಲುವಾಗಿ ಕಳೆದ 1968ರಲ್ಲಿ ಸ್ಥಳೀಯರೇ ನಿರ್ಮಾಣ ಮಾಡಿದ್ದ ಐತಿಹಾಸಿಕ ಕೆರೆಗಳು ಇದೀಗ ನಿರ್ವಹಣೆ ಇಲ್ಲದೆ ಬತ್ತಿ ಹೋಗುತ್ತಿವೆ. ಕೆರೆಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುತ್ತ ಬಂದಿರುವ ಜನನಾಯಕರು ಮಾತ್ರ ತಮ್ಮ ಕೆಲಸವಾದ ಬಳಿಕ ಮರೆಯುತ್ತಿದ್ದಾರೆ.
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ದೇವರಹಿಪ್ಪರಗಿ : ಜಮೀನಿಗೆ ನೀರುಣಿಸುವ ಸಲುವಾಗಿ ಕಳೆದ 1968ರಲ್ಲಿ ಸ್ಥಳೀಯರೇ ನಿರ್ಮಾಣ ಮಾಡಿದ್ದ ಐತಿಹಾಸಿಕ ಕೆರೆಗಳು ಇದೀಗ ನಿರ್ವಹಣೆ ಇಲ್ಲದೆ ಬತ್ತಿ ಹೋಗುತ್ತಿವೆ. ಕೆರೆಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುತ್ತ ಬಂದಿರುವ ಜನನಾಯಕರು ಮಾತ್ರ ತಮ್ಮ ಕೆಲಸವಾದ ಬಳಿಕ ಮರೆಯುತ್ತಿದ್ದಾರೆ.
ಹೀಗಾಗಿ, ಕುದುರುಗುಂಡ ಹಾಗೂ ಹುಣಶ್ಯಾಳ ಕೆರೆಗಳು ಅಭಿವೃದ್ಧಿ ಕಾಣದೇ ಈ ಭಾಗದ ರೈತರಿಗೆ ಜಲಮೂಲಗಳು ಇಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ.ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಭಾಗದ ಕೆರೆಗಳ ನಿರ್ಮಾಣದಲ್ಲಿ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಈ ಭಾಗದಲ್ಲಿ ಕಡಿಮೆ ಜಮೀನಗಳಿದ್ದರೂ ಜಮೀನಿನಲ್ಲಿ ತರಕಾರಿ ಜೊತೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈ ಭಾಗದ ತರಕಾರಿ ಹಣ್ಣು ಹಂಪಲು ರಾಜ್ಯ, ಅಂತರರಾಜ್ಯಗಳ ಮಾರುಕಟ್ಟೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ಆದರೆ, ಕಳೆದ 15 ವರ್ಷಗಳಿಂದ ವರುಣನ ಅಬ್ಬರವಿಲ್ಲದೆ ಕೆರೆ ಕಾಲುವೆಗಳು ಬತ್ತಿ ಹೋಗಿವೆ.
ಬಾವಿ ಬೋರ್‌ವೆಲ್‌ಗಳು ಬಂದಾಗಿ ನೀರಿಲ್ಲದೇ ರೈತ ಕಂಗಾಲಾಗಿದ್ದಾನೆ. ಕಳೆದ ಬಾರಿ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲರು ಕೆರೆ ತುಂಬಿಸಲು ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ನೀರು ಪೂರೈಕೆ ಮಾಡುವ ಭರವಸೆ ಕೊಟ್ಟಿದ್ದರು. ಆದರೆ, ಸದ್ಯ ಮಾತು ಮರೆತು ಬಿಟ್ಟಿದ್ದಾರೆ. ನಂತರ ಈ ಭಾಗದ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಜನವರಿ 2022ರಲ್ಲಿ ಸುಮಾರು ₹ 10 ಕೋಟಿ ವೆಚ್ಚದಲ್ಲಿ ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಿಂದ 169.76 ಕಿಮೀ ದೂರದಿಂದ ಕೆರೆ ತುಂಬುವ ಯೋಜನೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಅಂದಿನಿಂದ ಕೆರೆಗಳು ತುಂಬುತ್ತವೆ ಎಂದು ಈ ಭಾಗದ ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಈ ಕಾರ್ಯ ಇನ್ನೂ ಮುಂದುವರಿದಿಲ್ಲ.
ನಂತರ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗಲೂ ಗ್ರಾಮಸ್ಥರ ಕೆರೆ ತುಂಬಿಸಿಕೊಡುವಂತೆ ಮೊದಲ ಬೇಡಿಕೆಯನ್ನು ಇಟ್ಟಿದ್ದರು. ಗ್ರಾಮಸ್ಥರ ಬೇಡಿಕೆಯಂತೆ ಶಾಸಕರು ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಒತ್ತಾಯಿಸಿದ್ದರು. ಅಲ್ಲದೇ, ಗ್ಯಾರಂಟಿ ಸಮಸ್ಯೆಯಿಂದ ಗುತ್ತಿಗೆದಾರ ತಾ ಮಾಡಿದ ಕೆಲಸಕ್ಕೆ ಹಣ ನೀಡಿಲ್ಲ ಎಂದು ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾನೆ. ಹೀಗೆ ಹಲವಾರು ತೊಂದರೆಗಳಿಂದಾಗಿ ಹಾಗೂ ಯೋಜನೆಯಲ್ಲಿ ಅಧಿಕಾರಿಗಳ ತಾಂತ್ರಿಕ ಸಮಸ್ಯೆಯಿಂದಾಗಿ ಮತ್ತೆ ನನೆಗುದಿಗೆ ಬಿದ್ದಿರುವುದು ವಿಪರ್ಯಾಸ.
ಎಲ್ಲಾ ನಾಯಕರು, ಸರ್ಕಾರ ಹಾಗೂ ಅಧಿಕಾರಿಗಳು ಮಾತು ಕೊಟ್ಟು ಮರೆತು ಬಿಡುತ್ತಿದ್ದಾರೆ. ಇದರಿಂದ ಈ ಭಾಗದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಎಂ.ಬಿ. ಪಾಟೀಲರು ಈಗಲಾದರೂ ಗಮನ ಹರಿಸಿ ನೆರವಿಗೆ ಬರಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ.
ಐತಿಹಾಸಿಕ ಕೆರೆಗಳು:
1968ರಲ್ಲಿ ಕೆರೆಗಳು ನಿರ್ಮಾಣವಾಗಿದ್ದು, ಕೆರೆಗಳ ವಿಸ್ತೀರ್ಣ ಹುಣಶ್ಯಾಳ 1930 ಮೀಟರ್ ಉದ್ದವಾಗಿದೆ. ಕುದುರುಗುಂಡ ಕೆರೆ ವಿಸ್ತೀರ್ಣ 1800 ಮೀಟರ್ ಹೊಂದಿದೆ. ಇವು ತಾಲೂಕಿನಲ್ಲಿಯೇ ಅತಿ ದೊಡ್ಡ ಕೆರೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಹುಣಶ್ಯಾಳ ಕೆರೆಯಿಂದ 101 ಹೆಕ್ಟೇರ್ ಪ್ರದೇಶ ಹಾಗೂ ಕುದುರುಗುಂಡ ಕೆರೆಯಿಂದ 98 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಕುದುರುಗುಂಡ ಕೆರೆಗೆ ಕಳೆದ ವರ್ಷ ನೀರು ತುಂಬಿಸಿತ್ತು. ಆದರೆ ಹುಣಶ್ಯಾಳ ಕೆರೆ ನೀರಿಲ್ಲದೆ ಬಾವಿ, ಹಳ್ಳ ಹಾಗೂ ಬೋರ್‌ವೆಲ್‌ಗಳು ಬತ್ತಿ ಬರಿದಾಗಿವೆ. ಇದರಿಂದ ಕೃಷಿಗೆ ನೀರಿಲ್ಲದೇ ಸಾವಿರಾರು ರೈತರು ಗುಳೆ ಹೋಗಿದ್ದಾರೆ.
ಅನುದಾನ ನೀಡಲು ಒತ್ತಾಯ:
ಈ ಭಾಗದ ಸುಮಾರು 50 ಸಾವಿರ ಎಕರೆ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಸುಮಾರು ₹ 786 ಕೋಟಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ಕಾಮಗಾರಿ ಟೆಸ್ಟಿಂಗ್ ಹಂತದಲ್ಲಿದೆ. ಸರ್ಕಾರ ಶೀಘ್ರ ಮಂಜೂರಾತಿ ನೀಡಿದರೆ ಈ ಯೋಜನೆಯ ಸದುಪಯೋಗ ಆಗುತ್ತದೆ. ಇಲ್ಲದಿದ್ದರೆ ಈಗಾಗಲೇ ಹಲವಾರು ವಾಲ್, ಡೋರ್, ಪೈಪ್ ಸೇರಿದಂತೆ ಯೋಜನೆಯ ಕಾಮಗಾರಿ ಹಾಳಾಗಿದೆ. ಬೇಗ ಅನುದಾನ ನೀಡಿ ನೀರು ಹರಿದರೆ 38 ಹಳ್ಳಿಯ ರೈತರಿಗೆ ವರದಾನವಾಗಲಿದೆ.
ಅಧಿಕಾರಿಗಳ ತಾಂತ್ರಿಕ ಸಮಸ್ಯೆ ಹಾಗೂ ಗುತ್ತಿಗೆದಾರರು ಮಾಡಿದ ಕೆಲಸಕ್ಕೆ ಸರ್ಕಾರ ಹಣ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಕುರಿತು ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳಕ ಚೆಲುವ ಕೆಲಸ ಮಾಡಿದ್ದೇನೆ. ಮತ್ತೊಮ್ಮೆ ಅಧಿಕಾರಿಗಳ ಮಟ್ಟದ ಸಭೆ ಕರೆದು. ಮುಳವಾಡ ಮೇನ್ ಕಾಲುವೆ ಮೂಲಕ ರೀ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು ಎಂಬುವುದು ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಹುಣಶ್ಯಾಳ ಕೆರೆಗೆ ನೀರು ತುಂಬಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಶಾಸಕರು ದೇವರಹಿಪ್ಪರಗಿ