ವಿಜಯಪುರ : ಮೇಯರ್‌-ಉಪ ಮೇಯರ್‌ ಚುನಾವಣೆ ರದ್ದಾಯ್ತಾ? ಮುಂದೂಡ್ತಾ? ಅಧಿಕೃತ ಮಾಹಿತಿ ಹೊರಬಿದ್ದಿಲ್ಲ

KannadaprabhaNewsNetwork |  
Published : Jan 28, 2025, 12:49 AM ISTUpdated : Jan 28, 2025, 01:07 PM IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಸದಸ್ಯರು (ಫೋಟೋ) | Kannada Prabha

ಸಾರಾಂಶ

ವಿಜಯಪುರ ನಗರದ ನೂತನ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದ್ದರಿಂದಾಗಿ, ಸೋಮವಾರ ನಡೆಯಬೇಕಿದ್ದ ಚುನಾವಣೆಯೇ ರದ್ದಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

 ವಿಜಯಪುರ : ನಗರದ ನೂತನ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದ್ದರಿಂದಾಗಿ, ಸೋಮವಾರ ನಡೆಯಬೇಕಿದ್ದ ಚುನಾವಣೆಯೇ ರದ್ದಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಮೂಲಕ ಒಂದು ತಿಂಗಳಿಂದ ಕಾದು ಕುಳಿತಿದ್ದ ನಗರದ ನೂತನ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ಕೊನೆಗೂ ಕೈಗೂಡಲಿಲ್ಲ. ಗೊಂದಲ ಉಂಟಾಗಿದ್ದರಿಂದ, ಚುನಾವಣೆ ಕೂಡ ನಡೆಯಲಿಲ್ಲ ಎಂದು ಹೇಳಲಾಗುತ್ತಿದೆ.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ 22ನೇ ಅವಧಿಯ ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಯಿತು. ಪ್ರಾದೇಶಿಕ ಆಯುಕ್ತರಿಂದಲೇ ನಿಯಮಾವಳಿ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರೆ, ಚುನಾವಣೆಯೇ ರದ್ದಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ. ಹೀಗಾಗಿ ಚುನಾವಣೆ ರದ್ದಾಯಿತಾ ಅಥವಾ ಮುಂದೂಡಿಕೆಯಾಯಿತಾ ಎಂಬುದು ಸ್ಪಷ್ಟತೆ ಬಂದಿಲ್ಲ.

ಏನಾಯಿತು?: ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ಅಶೋಕ ನ್ಯಾಮಗೊಂಡ ಹಾಗೂ ಉಪಮೇಯರ್ ಸ್ಥಾನಕ್ಕೆ ವಿಮಲಾ ರಫೀಕ್ ಕಾಣೆ ನಾಮಪತ್ರ ಸಲ್ಲಿಸಿದ್ದರು. ಅತ್ತ ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ಎಂ.ಎಸ್.ಕರಡಿ, ಉಪಮೇಯರ್ ಸ್ಥಾನಕ್ಕೆ ಸುಮಿತ್ರಾ ಜಾಧವ ನಾಮಪತ್ರ ಸಲ್ಲಿಕೆ ಮಾಡಿದ್ದರು. ಮೇಯರ್‌ ಚುನಾವಣೆಯ ನಂತರ ಉಪ ಮೇಯರ್‌ ಚುನಾವಣೆ ನಡೆಯುತ್ತಿತ್ತು. ಆದರೆ, ಪ್ರಾದೇಶಿಕ ಆಯುಕ್ತರು ಬಿಜೆಪಿ ಸುಮಿತ್ರಾ ಜಾಧವ ಅವರ ಪರವಾಗಿರುವವರು ಕೈ ಎತ್ತಿ ಎಂದು ಹೇಳಿದರು. ನಂತರ ಕಾಂಗ್ರೆಸ್‌ ಅಭ್ಯರ್ಥಿ ವಿಮಲಾ ಕಾಣೆ ಅವರ ವಿರುದ್ಧವಾಗಿರುವವರು ಕೈ ಎತ್ತಿ ಎಂದು ಹೇಳಿದರು. ಇದರಿಂದ ಕಾಂಗ್ರೆಸ್‌ನವರು ತೀವ್ರ ಆಕ್ರೋಶ ಹೊರಹಾಕಿದರು. ಅಲ್ಲದೆ, ಗೊಂದಲ ಉಂಟಾಯಿತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬಾಯ್ತಪ್ಪಿನಿಂದ ಈ ಮಾತು ಹೇಳಿದ್ದೇನೆ ಎಂದು ಪ್ರಾದೇಶಿಕ ಆಯುಕ್ತರ ಹೇಳಿದರೂ ಕೇಳದೆ ಕಾಂಗ್ರೆಸ್‌ ನಾಯಕರು ಗದ್ದಲ ಎಬ್ಬಿಸಿದರು ಎಂದು ದೂರಿದ್ದಾರೆ. ಹೀಗಾಗಿ ಚುನಾವಣೆ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದ್ದರಿಂದ ಚುನಾವಣೆಯನ್ನು ರದ್ದುಗೊಳಿಸಲಾಯಿತು ಎಂದು ಬಿಜೆಪಿ ನಾಯಕರು ದೂರಿದ್ದಾರೆ.

ಪಕ್ಷೇತರರಾಗಿ ಆಯ್ಕೆಯಾಗಿ ಕಳೆದ ಅವಧಿಯ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಸುಮಿತ್ರ ಜಾಧವ (ಪ್ರಸ್ತುತ ಬಿಜೆಪಿ ಉಪ ಮೇಯರ್ ಅಭ್ಯರ್ಥಿ) ಸೇರಿದಂತೆ ಪಾಲಿಕೆಯ ಎಲ್ಲ ಬಿಜೆಪಿ ಸದಸ್ಯರು ಹಾಗೂ ಮತದಾನದ ಹಕ್ಕು ಹೊಂದಿರುವ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೇಶವ ಪ್ರಸಾದ್, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪರೇಡ್ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಆದರೆ, ಸೋಲು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ತಕರಾರು ತೆಗೆದಿದ್ದಾರೆ. 

ನಮ್ಮ ಅಭ್ಯರ್ಥಿ ಸುಮಿತ್ರಾ ಜಾಧವ ವಿರುದ್ಧವಾಗಿ ಯಾರಿದ್ದಿರೋ ಕೈ ಎತ್ತಿ ಎನ್ನುವ ಬದಲಿಗೆ ಕಾಂಗ್ರೆಸ್ ಅಭ್ಯರ್ಥಿ ವಿಮಲಾ ರಫೀಕ್ ಕಾಣೆ ವಿರುದ್ಧವಾಗಿ ಮತ ಹಾಕಿ ಎಂದು ಪ್ರಾದೇಶಿಕ ಆಯುಕ್ತರು ಹೇಳಿದ್ದಾರೆ. ಈ ವೇಳೆ ನಡೆದ ಸಹಿ ಹಾಕುವ ಪ್ರಕ್ರಿಯೆಯಲ್ಲಿ ನಾಲ್ಕೈದು ಸದಸ್ಯರು ಸಹಿ ಸಹ ಹಾಕಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಸೋಲಿನ ಹತಾಶೆಯಿಂದ ಚುನಾವಣೆ ಪ್ರಕ್ರಿಯೆ ಮುಂದೂಡಿ ಎಂದು ಗಲಾಟೆ ಆರಂಭಿಸಿದರು. ಮೇಯರ್ ಚುನಾವಣೆ ನಡೆದಿದೆ ಎಂದು ಪ್ರಾದೇಶಿಕ ಆಯುಕ್ತರು ರೂಲಿಂಗ್ ನೀಡಿ, ಉಪ ಮೇಯರ್ ಚುನಾವಣೆ ವೇಳೆ ಕೇವಲ ಸ್ಲಿಪ್ ಆಫ್ ಟಂಗ್ ಆಗಿದೆ ಎಂದು ಸಮಜಾಯಿಷಿ ನೀಡಿದರೂ ಕಾಂಗ್ರೆಸ್ ಸದಸ್ಯರು ಸೋಲುವ ಭಯದಿಂದ ಅದಕ್ಕೆ ಅಸಮಾಧಾನ ಹೊರಹಾಕಿದರು. ಚುನಾವಣೆ ಮುಂದೂಡಿ ಎಂಬ ನಾಟಕ ಆರಂಭಿಸಿ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಹೊರ ನಡೆದರು ಎಂದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಡಾ.ಎಂ.ಬಿ.ಪಾಟೀಲರು ಚುನಾವಣೆಯೇ ರದ್ದಾಗಿದೆ ಎಂಬ ಬಾಲಿಷ ಹೇಳಿಕೆ ನೀಡಿ ರಾಜ್ಯದ ಜನತೆ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಎಲ್ಲ ಸದಸ್ಯರನ್ನು ಅನರ್ಹಗೊಳಿಸುತ್ತೇವೆ, ಸರ್ಕಾರ ನಮ್ಮದಿದೆ ಎಂದು ಉತ್ತರ ನೀಡುವುದು ಸಚಿವರಿಗೆ ಶೋಭೆ ತರುವುದಿಲ್ಲ. ಚುನಾವಣೆಯನ್ನೇ ಬುಡಮೇಲು ಮಾಡುವ ಪ್ರಯತ್ನದಲ್ಲಿದ್ದಾರೆ. ನ್ಯಾಯಾಲಯ ನಮ್ಮ ರಕ್ಷಣೆಗೆ ಬರಲಿದೆ. ಅವರ ನಡೆಯನ್ನು ಉಗ್ರವಾಗಿ ಖಂಡಿಸುವುದಾಗಿ ಹೇಳಿದರು.ಪಾಲಿಕೆ ಕಚೇರಿಯಲ್ಲಿ ಧರಣಿ:ಪಾಲಿಕೆ ಕಚೇರಿ ಆವರಣದಲ್ಲಿ ಬಿಜೆಪಿ ಮುಖಂಡರು ಧರಣಿ ನಡೆಸಿದರು. ಸಂಜೆಯವರೆಗೂ ಧರಣಿ ಮುಂದುವರೆದಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ಬಿಟ್ಟು ಓಡಿ ಹೋಗಿದ್ದಾರೆ, ಸಂಜೆಯವರೆಗೂ ಅವಕಾಶವಿತ್ತು. ಆದರೆ ಸರ್ಕಾರದ ಕೈಗೊಂಬೆಯಂತೆ ವರ್ತಿಸುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ನಡೆ ಎಂದು ಖಂಡಿಸಿದರು

ಫಲಿತಾಂಶ ಕಾಯ್ದಿರಿಸಲು ಸೂಚನೆಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಆಯ್ಕೆಯಾದ ಸದಸ್ಯರು ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ, ಕುಟುಂಬಸ್ಥರ ಆಸ್ತಿ ಘೋಷಣೆ ಮಾಡಿಲ್ಲ ಎಂದು ಕಲಬುರ್ಗಿ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಇನ್ನೋರ್ವರು ಅನಧಿಕೃತವಾಗಿ ಪರಿಷತ್ ಸದಸ್ಯರನ್ನು ಚುನಾವಣೆ ಮತದಾರ ಯಾದಿಯಲ್ಲಿ ಸೇರ್ಪಡೆ ಮಾಡಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಚುನಾವಣೆ ನಡೆಸಲು ಸೂಚನೆ ನೀಡಿತ್ತು. ಆದರೆ ಜ.29ರಂದು ಚುನಾವಣೆ ಫಲಿತಾಂಶ ಪ್ರಕಟಿಸಲು ಸೂಚಿಸಿತ್ತು.

ಯಾರು, ಎಷ್ಟು ಸದಸ್ಯರಿದ್ದಾರೆ...?ಹಿಂದುಳಿದ ವರ್ಗ‌ಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಶೋಕ ನ್ಯಾಮಗೌಡ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಎಂ‌.ಎಸ್.ಕರಡಿ ನಾಮಪತ್ರ ಸಲ್ಲಿದ್ದಾರೆ. ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾದ ಮಿಮಲಾ ರಪೀಕ್ ಕಾಣೆ ಹಾಗೂ ಸುಮಿತ್ರಾ ಜಾಧವ ನಾಮಪತ್ರ ಸಲ್ಲಿಸಿದ್ದಾರೆ‌.ಒಟ್ಟು 35 ಪಾಲಿಕೆ ಸದಸ್ಯರು ಹಾಗೂ 11 ಜನ ಶಾಸಕರು, ಸಂಸದರು ಸೇರಿ 46 ಜನ ಮತದಾನಕ್ಕೆ ಹಕ್ಕು ಹೊಂದಿದ್ದಾರೆ. 

35 ಪಾಲಿಕೆ ಸದಸ್ಯರ ಪೈಕಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರ 5, ಎಂಐಎಂ 2, ಜೆಡಿಎಸ್ 1 ಸ್ಥಾನ ಹೊಂದಿವೆ. ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹಾಗೂ ಕೇಶವ್ ಪ್ರಸಾದ್ ಮತದಾನದ ಹಕ್ಕು ಹೊಂದಿದ್ದಾರೆ. 17 ಪಾಲಿಕೆ ಸದಸ್ಯರು ಹಾಗೂ 4 ಜನ ಜನಪ್ರತಿನಿಧಿಗಳು ಮತ ಸೇರಿ‌ ಬಿಜೆಪಿ 21 ಮತ ಹೊಂದಿದೆ. ಕಾಂಗ್ರೆಸ್‌ನಲ್ಲಿ 10 ಪಾಲಿಕೆ ಸದಸ್ಯರು ಸೇರಿ, ಎಂ.ಬಿ.ಪಾಟೀಲ್, ಶಾಸಕ ವಿಠ್ಠಲ ಕಟಕಧೋಂಡ, ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್, ತಿಪ್ಪಣ್ಣ ಕಮಕನೂರ, ಜಗದೇವ ಗುತ್ತಿಗೆದಾರ್, ಬಿಲ್ಕೇಶ್ ಬಾನೋ ಹಾಗೂ ಎ.ವಸಂತಕುಮಾರ್ ಸೇರಿ 17 ಜನ ಮತದಾನದ ಹಕ್ಕು ಹೊಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!