ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಮುಖ್ಯ ಶಿಕ್ಷಕ ಭೈರೇಗೌಡ ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹಾಗೂ ನೂರಾರು ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯ ಶಿಕ್ಷಕ ಭೈರೇಗೌಡ ಅ ವರನ್ನು ಇದೇ ಶಾಲೆಯಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿದರು.
ಸ್ವಯಂ ಪ್ರೇರಿತ ವರ್ಗಾವಣೆಸರ್ಕಾರಿ ಶಾಲೆಯನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎಂದು ತೋರಿಸಿಕೊಟ್ಟ ಮಾದರಿ ಮುಖ್ಯ ಶಿಕ್ಷಕ ಭೈರೇಗೌಡ ಸ್ವಯಂ ಪ್ರೇರಿತರಾಗಿ ವರ್ಗಾವಣೆ ಮಾಡಿಕೊಂಡಿರಬಹುದು. ಆದರೆ ಅವರಿಗೆ ಮಾನಸಿಕವಾಗಿ ಒತ್ತಡ ಹೇರಿ ಅಂತಹ ಸನ್ನಿವೇಶ ಸೃಷ್ಟಿ ಮಾಡಿರುವ ಸಾಧ್ಯತೆ ಇದೆ. ಇದು ಖಂಡನೀಯ. ಮುಖ್ಯ ಶಿಕ್ಷಕರ ವರ್ಗಾವಣೆ ಮಾಡಿದರೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅವರನ್ನು ಇಲ್ಲೆ ಮುಂದುವರಿಸಬೇಕು ಎಂದು ಶಾಲೆ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಒತ್ತಾಯಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದರೆಡ್ಡಿ ಮಾತನಾಡಿ, ಯಾವುದೆ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಹೀಗಿರುವಾಗ ಮುಖ್ಯಶಿಕ್ಷಕರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ವರ್ಗಾವಣೆ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಗೊಲ್ಲಪಲ್ಲಿಪ್ರಸನ್ನ ದೂರಿದರು.
ಮುಖ್ಯ ಶಿಕರ ವಿರುದ್ಧ ಆರೋಪಅತಿಥಿ ಶಿಕ್ಷಕಿಯೊಬ್ಬರ ಸಂಬಳ ವಿಚಾರದಲ್ಲಿ ಅಕ್ರಮ ಆಗಿದೆ ಎಂದು ಮುಖ್ಯ ಶಿಕ್ಷಕ ಭೈರೇಗೌಡರ ಮೇಲೆ ಆರೋಪಿಸಲಾಗಿದೆ. ಈ ವಿಷಯ ಶಾಲೆ ಹೊರಗೆ ತಾಲೂಕು ಶಿಕ್ಷಕರ ಸಂಘದಲ್ಲಿ ದೊಡ್ದ ಸದ್ದು ಮಾಡಿದೆ. ಎರಡು ಬಣಗಳ ನಡುವೆ ವಿವಾದವಾಗಿ ಮಾರ್ಪಟ್ಟ ಕಾರಣ ಶಿಕ್ಷಕ ಭೈರೇಗೌಡ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಮುಖ್ಯ ಶಿಕ್ಷಕ ಭೈರೇಗೌಡ ತಾವೇ ಆಂಧ್ರದ ಗಡಿಯಂಚಿನಲ್ಲಿರುವ ತಾಲೂಕಿನ ಕೊನೆಯ ಗ್ರಾಮವಾದ ಮುದಿಮಡಗು ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.