ಶಿರೂರು: ಕಣ್ಮರೆಯಾದವರ ಪತ್ತೆಗೆ ಡ್ರೆಜಿಂಗ್‌ ಕಾರ್ಯ?

KannadaprabhaNewsNetwork |  
Published : Jul 30, 2024, 12:34 AM IST
ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ  | Kannada Prabha

ಸಾರಾಂಶ

ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾಗಿರುವ ಮೂವರ ಶೋಧ ಕಾರ್ಯಾಚರಣೆ ವಿಫಲವಾಗಿರುವುದರಿಂದ ಕೇರಳದ ತ್ರಿಶೂರ್ ತಾಂತ್ರಿಕ ತಜ್ಞರಿಂದ ಬ್ರಿಜ್ ಮೌಂಟೆಂಡ್ ಡ್ರೆಜಿಂಗ್ ಕಾರ್ಯಾಚರಣೆ ಬಗ್ಗೆ ಜಿಲ್ಲಾಡಳಿತ ಲಿಖಿತ ವರದಿ ಕೇಳಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾಗಿರುವ ಮೂವರ ಶೋಧ ಕಾರ್ಯಾಚರಣೆ ವಿಫಲವಾಗಿರುವುದರಿಂದ ಕೇರಳದ ತ್ರಿಶೂರ್ ತಾಂತ್ರಿಕ ತಜ್ಞರಿಂದ ಬ್ರಿಜ್ ಮೌಂಟೆಂಡ್ ಡ್ರೆಜಿಂಗ್ ಕಾರ್ಯಾಚರಣೆ ಬಗ್ಗೆ ಜಿಲ್ಲಾಡಳಿತ ಲಿಖಿತ ವರದಿ ಕೇಳಿದೆ.

ವರದಿ ಪೂರಕವಾಗಿದ್ದಲ್ಲಿ ಸದ್ಯವೇ ಆ ರೀತಿಯ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಶಿರೂರಿನಲ್ಲಿ ಸಂಚಾರ ವ್ಯವಸ್ಥೆ ಪುನಾರಂಭಕ್ಕೆ ಅವಕಾಶ ಮಾಡಿಕೊಡುವ ಕಾರ್ಯ ನಡೆದಿದೆ. ಗುಡ್ಡ ಕುಸಿತದಿಂದ ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು, ಬಂಡೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ತ್ರಿಶೂರ್ ತಂತ್ರಜ್ಞರ ವರದಿ ಪೂರಕವಾಗಿದ್ದಲ್ಲಿ ನೌಕಾಪಡೆ, ಕೋಸ್ಟ್‌ಗಾರ್ಡ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಹೀಗೆ ಹಲವು ತಂಡಗಳನ್ನು ಜತೆಗೂಡಿಸಿಕೊಂಡು ಮತ್ತೆ ಕಾರ್ಯಾಚರಣೆ ಆರಂಭಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.

ಗುಡ್ಡದ ಪಕ್ಕದ ರಸ್ತೆಯನ್ನು ಹಾಗೇ ಬಿಟ್ಟು, ನದಿ ಪಕ್ಕದ ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುಕೂಲವಾಗುವಂತೆ ಐಆರ್‌ಬಿ ಕಾಮಗಾರಿ ನಡೆಸುತ್ತಿದೆ. ಆದರೆ ಈ ಕಾಮಗಾರಿ ತೃಪ್ತಿಕರ ಹಾಗೂ ಸುರಕ್ಷಿತವಾಗಿದ್ದಲ್ಲಿ ಜಿಲ್ಲಾಡಳಿತ ಸಂಚಾರ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಮಾಲೀಕನಿಗಾಗಿ ಶೋಧ ನಡೆಸುತ್ತಿರುವ ಶ್ವಾನ!: ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಎಲ್ಲ ರಕ್ಷಣಾ ತಂಡಗಳು ಕಣ್ಮರೆಯಾದವರ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದರೂ ಘಟನೆಯಲ್ಲಿ ಮೃತಪಟ್ಟ ಲಕ್ಷ್ಮಣ ನಾಯಕ ಅವರ ನಾಯಿ ಮಾತ್ರ ಸುತ್ತಮುತ್ತ ತಿರುಗುತ್ತ ತನ್ನ ಮಾಲೀಕರಿಗಾಗಿ ಹುಡುಕಾಡುತ್ತಲೇ ಇದೆ.

ಜು.16ರಂದು ನಡೆದ ಗುಡ್ಡ ಕುಸಿತ ದುರಂತದಲ್ಲಿ ಲಕ್ಷ್ಮಣ ನಾಯ್ಕ ಅವರ ಇಡೀ ಕುಟುಂಬದ ಐವರೂ ಸದಸ್ಯರು ಸಾವು ಕಂಡಿದ್ದಾರೆ. ಆದರೆ ಅವರ ಮನೆಯ ಶ್ವಾನ ಮಾತ್ರ ಒಂದು ಕಾಲಿಗೆ ಪೆಟ್ಟು ಮಾಡಿಕೊಂಡರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದೆ. ಅಂದಿನಿಂದ ಇಂದಿನ ತನಕ ಮಳೆಯಲ್ಲಿ ನೆನೆಯುತ್ತ, ಹಗಲು ರಾತ್ರಿ ತನ್ನನ್ನು ಸಾಕಿ ಸಲಹಿದವನ್ನು ದುರಂತ ನಡೆದ ಸ್ಥಳದಲ್ಲಿ ಓಡಾಡಿಕೊಂಡು ಶ್ವಾನ ಹುಡುಕುತ್ತಲೇ ಇದೆ. ನಾಯಿಯ ಈ ಪ್ರೀತಿ ಕಂಡು ಸಾರ್ವಜನಿಕರ ಕಣ್ಣಾಲಿ ಒದ್ದೆಯಾಗುವಂತೆ ಮಾಡುತ್ತಿದೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು