ಸಿಎಂ ತೇಜೋವಧೆ ನಿಲ್ಲಿಸದಿದ್ದರೆ ಅಹಿಂದ ವರ್ಗ ದಂಗೆ ಏಳಲಿವೆ

KannadaprabhaNewsNetwork | Published : Jul 30, 2024 12:34 AM

ಸಾರಾಂಶ

ಹೇಗಾದರೂ ಮಾಡಿ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಒಂದೇ ಉದ್ದೇಶದಿಂದ ರಾಜಕೀಯ ಹುನ್ನಾರ ಮಾಡುತ್ತಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಎಂಡಿಎ ಹಗರಣದ ಹೆಸರಿನಲ್ಲಿ ತೇಜೋವಧೆ ಮಾಡುವುದನ್ನು ನಿಲ್ಲಿಸದಿದ್ದರೆ ಜೆಡಿಎಸ್- ಬಿಜೆಪಿ ವಿರುದ್ಧ ಅಹಿಂದ ವರ್ಗ ದಂಗೆ ಏಳಲಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಎಚ್ಚರಿಸಿದರು.ಕರ್ನಾಟಕರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ 2021ರಲ್ಲಿ ಎಂಡಿಎಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಸಾರ್ವಜನಿಕ ಚರ್ಚೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಹುನ್ನಾರ ಮಾಡುತ್ತಿವೆ. ಹೇಗಾದರೂ ಮಾಡಿ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಒಂದೇ ಉದ್ದೇಶದಿಂದ ರಾಜಕೀಯ ಹುನ್ನಾರ ಮಾಡುತ್ತಿವೆ ಎಂದು ಆರೋಪಿಸಿದರು.ಎಂಡಿಎ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ಪಕ್ಷದವರು ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವುದು ಸರಿಯಷ್ಟೆ. 2021ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ ಎಂಡಿಎಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಆ ಭ್ರಷ್ಟಾಚಾರದ ರೂವಾರಿ ಆಗಿನ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ಬಿ.ವೈ. ವಿಜಯೇಂದ್ರ ಮತ್ತು ಅವರ ತಂಡ. ಇದರ ವಿರುದ್ಧ 2021ರಲ್ಲಿ ಹೋರಾಟ ನಡೆಸಿ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸಿ, ಸಿಬಿಐ ತನಿಖೆಗೆ ಆಗ್ರಹಿಸಿತ್ತು ಎಂದು ಅವರು ತಿಳಿಸಿದರು.ಈ ಹಿನ್ನೆಲೆಯಲ್ಲಿ ನಾವು ಬಿ.ವೈ. ವಿಜಯೇಂದ್ರ ಅವರಿಗೆ ಪತ್ರ ಬರೆದು ಎಂಡಿಎ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಮುಕ್ತ ಆಹ್ವಾನ ನೀಡಿದ್ದೆವು. ಆದರೆ, ಅವರು ಸಾರ್ವಜನಿಕ ಚರ್ಚೆಗೆ ಆಗಮಿಸದೆ ಪಲಾಯನವಾದ ಮಾಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವುದು, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿರುವುದು ಸಾಬೀತಾಗಿದೆ. ಇನ್ನಾದರೂ ಎಚ್ಚೆತ್ತು ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಪಿತೂರಿ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೀಶ್ ಉಪ್ಪಾರ್, ಕಾಂಗ್ರೆಸ್ ಓಬಿಸಿ ಘಟಕದ ನಗರಾಧ್ಯಕ್ಷ ಎನ್.ಆರ್. ನಾಗೇಶ್, ಮುಖಂಡರಾದ ನಾಸೀರ್, ಲೋಕೇಶ್, ಕೇಶವ, ಮಂಜುಳಾ, ಮಂಗಳಾ ಮೊದಲಾದವರು ಇದ್ದರು.

Share this article