ಆರು ಜನರಿಗೆ ಜೀವಕೊಟ್ಟು ಚಂದನ ಕೊನೆಯುಸಿರು

KannadaprabhaNewsNetwork | Published : Jul 30, 2024 12:34 AM

ಸಾರಾಂಶ

ಜು.23ರಂದು ರಸ್ತೆ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ವಿ. ಚಂದನ (13) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಕನ್ನಡಪ್ರಭ ವಾರ್ತೆ ತಿಪಟೂರು

ಜು.23ರಂದು ರಸ್ತೆ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ವಿ. ಚಂದನ (13) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ನಗರದ ವಿವೇಕಾನಂದ ಇಂಟರ್ ನ್ಯಾಷನಲ್‌ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ ಚಂದನ ಜು.23ರಂದು ಶಾಲೆ ಬಿಟ್ಟ ನಂತರ ಹಾಲ್ಕುರಿಕೆ- ಹುಳಿಯಾರು ರಸ್ತೆಯ ಮೇಲೆ ಬರುವಾಗ ಲಾರಿ ಢಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದಳು. ಕೂಡಲೇ ಸ್ಥಳೀಯವಾಗಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ತಲೆಗೆ ಬಲವಾಗಿ ಏಟು ಬಿದ್ದ ಪರಿಣಾಮ ಮೆದುಳು ನಿಷ್ಕ್ರೀಯಗೊಂಡಿತ್ತು. ಇದರಿಂದಾಗಿ ವೈದ್ಯರ ಸಲಹೆ ಮೇರೆಗೆ ಪಾಲಕರು ಮಗಳ ಸಾವಿನಲ್ಲೂ ಸಹ ಅವಳ ಕಣ್ಣು, ಕಿಡ್ನಿ, ಲೀವರ್ ದಾನ ಮಾಡುವ ಮೂಲಕ ಹಲವರಿಗೆ ಜೀವದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ನಡೆದಿದ್ದೇನು ? : 7ನೇ ತರಗತಿಯಲ್ಲಿ ಓದುತ್ತಿದ್ದ ನಗರದ ಹಳೇಪಾಳ್ಯದ ವಸಂತ್‌ಕುಮಾರ್ ಮತ್ತು ದಿವ್ಯ ದಂಪತಿಗಳ ಪುತ್ರಿ ಚಂದನ ಎಂದಿನಂತೆ ಅಪಾಯಕಾರಿ ರಸ್ತೆಯಂದೇ ಬಿಂಬಿತವಾಗಿರುವ ಹಾಲ್ಕುರಿಕೆ- ಹುಳಿಯಾರು ರಸ್ತೆಯಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ಸೈಕಲ್‌ನಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಚಂದನಳ ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹಾಸನದ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಚಿಕಿತ್ಸೆ ಫಲಿಸದೆ ಮೆದುಳು ನಿಷ್ಕ್ರಯಗೊಂಡಿತ್ತು. ಈ ಸಂದರ್ಭದಲ್ಲಿ ತಂದೆ ತಾಯಿ ತನ್ನ ಮಗಳ ಸಾವಿನ ದುಃಖ, ನೋವಿನಲ್ಲೂ ಮಗಳ ದೇಹದ ಅಮೂಲ್ಯವಾದ ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ಆರಕ್ಕೂ ಹೆಚ್ಚು ಅಂಗಾಂಗಗಳನ್ನು ಬೇರೆಯವರ ಅಮೂಲ್ಯ ಜೀವ ಹಾಗೂ ಜೀವನ ಉಳಿಸಲು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದು ಅಪ್ರಾಪ್ತ ಬಾಲಕಿಯೊಬ್ಬಳ ಅಂಗಾಂಗಗಳನ್ನು ದಾನ ಮಾಡಿರುವುದು ವೈದ್ಯಕೀಯ ಇತಿಹಾಸದಲ್ಲಿ ದಾಖಲಾಗಿದೆ. ತಂದೆ ತಾಯಿಯ ಈ ನಿರ್ಧಾರಕ್ಕೆ ವೈದ್ಯರಾದಿಯಾಗಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ : ಸೋಮವಾರ 10.30ರವೇಳೆಗೆ ಚಂದನಳ ಪಾರ್ಥಿವ ಶರೀರವನ್ನು ತಿಪಟೂರಿಗೆ ತಂದಿದ್ದು ನಗರದ ಡಾ. ಶಿವಕುಮಾರಸ್ವಾಮಿ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಆರೋಗ್ಯ ಇಲಾಖೆ, ವಿವೇಕಾನಂದ ಶಾಲೆ ಸೇರಿದಂತೆ ನಗರದ ಬಹುತೇಕ ಶಾಲೆಗಳ ಮುಖ್ಯಸ್ಥರು, ಸಂಘಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ನೂರಾರು ಸಾರ್ವಜನಿಕರು ಬರಮಾಡಿಕೊಂಡು, ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ಮೂಲಕ ಹಳೇಪಾಳ್ಯದ ಅವರ ಸ್ವಗೃಹಕ್ಕೆ ಕಳುಹಿಸಿ ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ನಗರದ ಆದಿನಾಯಕನಹಳ್ಲಿ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಚಂದನಳ ಪಾರ್ಥಿವ ಶರೀರವನ್ನು ತಿಪಟೂರಿನಲ್ಲಿ ಬರಮಾಡಿಕೊಂಡ ಉಪವಿಭಾಗಾಧಿಕಾರಿ ಸಪ್ತಶ್ರೀ , ತಾಲೂಕು ಆರೋಗ್ಯಾಧಿಕಾರಿ ಡಾ. ರಾಧಿಕಾ, ತಹಸೀಲ್ದಾರ್ ಪವನ್‌ ಕುಮಾರ್‌ ಮಾತನಾಡಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟಿರುವುದು ನೋವು ತಂದಿದೆ. ಮುಖ್ಯ ರಸ್ತೆಯಲ್ಲಿರುವ ಶಾಲಾ-ಕಾಲೇಜುಗಳ ಬಳಿ ಶಾಲಾ ಮುಖ್ಯಸ್ಥರು ಸೂಚನಾ ಫಲಕಗಳನ್ನು ಹಾಕಬೇಕು. ಈ ಸಂಬಂಧ ನಾವು ಸಹ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿನಿ ಸಾವಿನ ನೋವಿನಲ್ಲೂ ಅವರ ತಂದೆ ತಾಯಿಗಳು ಮಗಳ ಅಂಗಾಂಗಗಳನ್ನು ದಾನ ಮಾಡಿರುವುದು ತಿಪಟೂರು ಇತಿಹಾಸದಲ್ಲೇ ನೋವಿನ ಹಾಗೂ ಅವಿಸ್ಮರಣೀಯ ಸಂಗತಿಯಾಗಿದ್ದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರಿಗೆ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು. ಅಂತಿಮ ದರ್ಶನದಲ್ಲಿ ಬಿಜೆಪಿ ಮುಖಂಡ ಲೋಕೇಶ್ವರ, ಮಾಜಿ ಸಚಿವ ಬಿ.ಸಿ. ನಾಗೇಶ್, ತಾ.ಪಂ ಇಓ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಡಾ. ವಿವೇಚನ್, ಡಾ. ಶ್ರೀಧರ್, ಬಿಇಓ ಚಂದ್ರಯ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿವರ್ಗದವರು, ಸಂಘ ಸಂಸ್ಥೆಗಳವರು, ರಾಜಕೀಯ ಮುಖಂಡರು, ವಿವಿಧ ಶಾಲಾ ಸಂಸ್ಥೆಗಳವರು, ಸಾರ್ವಜನಿಕರು ಆಗಮಿಸಿ ಚಂದನಾಗೆ ಅಂತಿಮ ನಮನ ಸಲ್ಲಿಸಿದರು.

Share this article