ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ರದ್ದು?

KannadaprabhaNewsNetwork |  
Published : Sep 18, 2026, 01:45 AM IST
ಬ್ಯಾಡಗಿ ತಾಲೂಕಿನ ಸೂಡಂಬಿ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಬಸವರಾಜ ಶಿವಣ್ಣನವರ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಅಕ್ರಮ ಬಯಲಾದ ಬೆನ್ನಲ್ಲೇ ರಾಜ್ಯ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಬಯಲಾದ ಬೆನ್ನಲ್ಲೇ ರಾಜ್ಯ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 545 ಸಬ್ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಬೆಳಕಿಗೆ ಬಂದ ಬಳಿಕ ಲಿಖಿತ ಪರೀಕ್ಷೆ ರದ್ದಾಗಿತ್ತು. ಅದೇ ಮಾದರಿಯಲ್ಲೇ ಈಗ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಬಯಲಾದ ಹಿನ್ನೆಲೆಯಲ್ಲಿ ಮರು ಲಿಖಿತ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ.

ಈಗಾಗಲೇ ಮರು ಪರೀಕ್ಷೆಗೆ ಒತ್ತಾಯಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೆಲ ಅಭ್ಯರ್ಥಿಗಳು ಮನವಿ ಸಹ ಮಾಡಿದ್ದಾರೆ. ಹೀಗಾಗಿ ಸಿಐಡಿ ತನಿಖೆ ಬಗ್ಗೆ ಮಾಹಿತಿ ಪಡೆದು ಲಿಖಿತ ಪರೀಕ್ಷೆ ರದ್ದು ವಿಚಾರವಾಗಿ ಮುಖ್ಯಮಂತ್ರಿರವರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಅಧಿಕಾರಿಗಳಿಂದ ಸರ್ಕಾರಕ್ಕೆ ಮಾಹಿತಿ:

ಇದೇ ಪ್ರಥಮ ಬಾರಿಗೆ ಮೀನುಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಗಳಿಗೆ ಕೆಪಿಎಸ್‌ಸಿ ಮೂಲಕ 400 ಪಶು ವೈದ್ಯರ ನೇಮಕಕ್ಕೆ ಸರ್ಕಾರ ನಿರ್ಧರಿಸಿತ್ತು. ಇದಕ್ಕೂ ಮುನ್ನ ಆಯಾ ಇಲಾಖಾ ಮಟ್ಟದಲ್ಲಿ ನೇಮಕಾತಿ ನಡೆಯುತ್ತಿತ್ತು. ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಸಲುವಾಗಿ ಕೆಪಿಎಸ್‌ಸಿ ಮೂಲಕ ನೇಮಕಕ್ಕೆ ಸರ್ಕಾರ ತೀರ್ಮಾನಿಸಿತ್ತು. ಆದರೆ ಕೆಪಿಎಸ್‌ಸಿಯಲ್ಲೇ ಪಶುವೈದ್ಯ ಹುದ್ದೆಗಳು ಬಿಕರಿಯಾಗಿ ಸರ್ಕಾರಕ್ಕೆ ಭ್ರಮನಿರಸನ ಆಗಿದೆ.

ಇನ್ನು ಅಂದು ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರೇ ಜೈಲು ಸೇರಿದ್ದಾರೆ. ಈ ನೇಮಕಾತಿ ಹಗರಣದ ಸಂಬಂಧ ಸಿಐಡಿಯ ಮೊದಲ ಹಂತದ ತನಿಖೆಯಲ್ಲಿ 11 ಅಭ್ಯರ್ಥಿಗಳು ಪಾಲ್ಗೊಂಡಿರುವುದು ಖಚಿತವಾಗಿದೆ. ಈ ಹಗರಣದ ಶೋಧನೆಗೆ ಎರಡನೇ ಹಂತದ ಕಾರ್ಯಾಚರಣೆಯನ್ನೂ ಸಿಐಡಿ ಆರಂಭಿಸಿದ್ದು, ಪಶುವೈದ್ಯ ಹುದ್ದೆ ಖರೀದಿಸಿದ್ದ ಮತ್ತಷ್ಟು ಅಭ್ಯರ್ಥಿಗಳಿಗೆ ತನಿಖೆಯ ಉರುಳು ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಪಶುವೈದ್ಯರ ನೇಮಕಾತಿ ನೈತಿಕತೆ ಉಳಿಸಿಕೊಳ್ಳಲು ಮರು ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಚಿಂತನ-ಮಂಥನ ನಡೆದಿದೆ. ಈ ಬಗ್ಗೆ ಸಿಐಡಿ ಹಿರಿಯ ಅಧಿಕಾರಿಗಳಿಂದ ಅಭಿಪ್ರಾಯವನ್ನು ಕೂಡ ಸರ್ಕಾರ ಪಡೆದಿದೆ ಎಂದು ಮೂಲಗಳು ಹೇಳಿವೆ.

ಮರು ಪರೀಕ್ಷೆಗೆ ಆಯ್ಕೆಯಾದವರ ಆಕ್ಷೇಪ:

ಮರು ಲಿಖಿತ ಪರೀಕ್ಷೆ ನಡೆಸುವ ಪ್ರಸ್ತಾಪಕ್ಕೆ ಪಶು ವೈದ್ಯ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರತ್ಯೇಕವಾಗಿ ಮನವಿಯನ್ನೂ ಮಾಡಿದ್ದಾರೆ. ಅಲ್ಲದೆ ಕಾನೂನು ಹೋರಾಟದ ಬಗ್ಗೆ ಕೆಲ ಅಭ್ಯರ್ಥಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಉದ್ಯೋಗ ನೀಡುವ ಶಕ್ತಿಯಾಗಲಿ: ಜೋಶಿ
40 ವರ್ಷ, 3 ಜ್ಯೋತಿರ್ಲಿಂಗ, 10 ಸಾವಿರ ಭಕ್ತರು!