ಕ್ಯಾನ್ಸರ್‌ ಇಂಜೆಕ್ಷನ್‌: ವಿಮಾ ಕಂಪನಿಗೆ ಹೈಕೋರ್ಟ್‌ ತರಾಟೆ

KannadaprabhaNewsNetwork |  
Published : Jul 20, 2026, 04:30 AM ISTUpdated : Jul 20, 2026, 04:53 AM IST
High Court

ಸಾರಾಂಶ

ನಾಲ್ಕನೇ ಹಂತದ ಕ್ಯಾನ್ಸರ್ ರೋಗ ಪೀಡಿತನಿಗೆ ಕೀಮೋಥೆರಪಿ ಹಾಗೂ ಕಾರ್ಸಿನೋಮದ ಚಿಕಿತ್ಸೆಗೆಂದು ಪಡೆದ ಝೋಲಾಡೆಕ್ಸ್ ಮತ್ತು ಎಕ್ಸ್ ಗೆವಾ ಇಂಜೆಕ್ಷನ್‌ಗೆ ವ್ಯಯಿಸಿದ ಹಣವನ್ನು ಮರು ಪಾವತಿಸಲು ನಿರಾಕರಿಸಿದ ವಿಮಾ‌ ಕಂಪನಿಯನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು :  ನಾಲ್ಕನೇ ಹಂತದ ಕ್ಯಾನ್ಸರ್ ರೋಗ ಪೀಡಿತನಿಗೆ ಕೀಮೋಥೆರಪಿ ಹಾಗೂ ಕಾರ್ಸಿನೋಮದ ಚಿಕಿತ್ಸೆಗೆಂದು ಪಡೆದ ಝೋಲಾಡೆಕ್ಸ್ ಮತ್ತು ಎಕ್ಸ್ ಗೆವಾ ಇಂಜೆಕ್ಷನ್‌ಗೆ ವ್ಯಯಿಸಿದ ಹಣವನ್ನು ಮರು ಪಾವತಿಸಲು ನಿರಾಕರಿಸಿದ ವಿಮಾ‌ ಕಂಪನಿಯನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ವಿಮಾ‌‌ ಕಂಪನಿ ಅಧಿಕಾರಿಗಳು ಮಾನವೀಯತೆ ರೂಢಿಸಿಕೊಳ್ಳಬೇಕು.‌ ವಿಮೆಯು ಕಂಪನಿಗೆ ವ್ಯಾಪಾರ ಆಗಿರಬಹುದು.‌‌ ಆದರೆ, ಪಾಲಿಸಿದಾರನಿಗೆ ಜೀವವೇ ಆಗಿರುತ್ತದೆ. ನಾಲ್ಕನೇ ಹಂತದ ಕ್ಯಾನ್ಸರ್ ಪೀಡಿತನನ್ನು ಈ ಮಾದರಿಯಲ್ಲಿ ನಡೆಸಿಕೊಳ್ಳುವುದೇ, ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಬೇಕಾ ಅಥವಾ ಕೋರ್ಟ್ ನಲ್ಲಿ ವಿಮಾ ಕಂಪನಿ ವಿರುದ್ಧ ಹೋರಾಟ ಮಾಡಬೇಕಾ ಎಂದು ಹೈಕೋರ್ಟ್‌ ಪ್ರಶ್ನಿಸಿದೆ.

ಝೋಲಾಡೆಕ್ಸ್ ಮತ್ತು ಎಕ್ಸ್ ಗೆವಾ ಇಂಜೆಕ್ಷನ್ ಕೀಮೋಥೆರಪಿ ಹಾಗೂ ಕಾರ್ಸಿನೋಮ ಚಿಕಿತ್ಸೆಗೆ ಸಂಬಂಧಿಸಿಲ್ಲ ಎಂದು ದೃಢಪಡಿಸುವ ದಾಖಲೆಗಳನ್ನು ಒಂದು ವಾರದಲ್ಲಿ ಸಲ್ಲಿಸಬೇಕು.‌‌ ಒಂದು ವೇಳೆ ಅಂಥ ದಾಖಲೆಗಳನ್ನು ಸಲ್ಲಿಸದೇ ಹೋದರೆ, ವಿಮಾ‌ ಕಂಪನಿಯು ದುರುದ್ದೇಶಪೂರಿತ ನಡೆಗೆ ಪ್ರತಿಕೂಲ‌ ಪರಿಣಾಮ ಎದು ರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ

ಆರೋಗ್ಯ ವಿಮಾ ಪಾಲಿಸಿ‌ ಪಡೆದಿದ್ದರೂ ಕ್ಯಾನ್ಸರ್ ರೋಗ ಪೀಡಿತರೊಬ್ಬರು ವೈದ್ಯರ ಸಲಹೆಯಂತೆ ಪಡೆದ ಝೋಲಾಡೆಕ್ಸ್ ಮತ್ತು ಎಕ್ಸ್ ಗೆವಾ ಇಂಜೆಕ್ಷನ್‌ಗಳಿಗೆ ವ್ಯಯಿಸಿದ ಹಣವನ್ನು ಪಾವತಿಸಲು ಸೂಚಿಸಿ ಲೋಕ ಅದಾಲತ್ ಹೊರಡಿಸಲಾದ ಆದೇಶ ಪ್ರಶ್ನಿಸಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರ ಪೀಠ ವಿಮಾ‌ ಕಂಪನಿಗೆ ಈ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ. 

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಇಂಜೆಕ್ಷನ್‌ ಗೆ ವ್ಯಯಿಸಿದ ಹಣವನ್ನು ಏಕೆ ಮರು ಪಾವತಿ ಮಾಡುತ್ತಿಲ್ಲ ಎಂದು ವಿಮಾ‌ ಕಂಪನಿಯ‌ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.ವಿಮಾ ಕಂಪನಿ‌ ಪರ ವಕೀಲರು ಉತ್ತರಿಸಿ, ಪ್ರತಿವಾದಿಯಾದ ವ್ಯಕ್ತಿ 2014 ರಲ್ಲಿ‌ ಆರೋಗ್ಯ ತಪಾಸಣೆಗೆ ಒಳಗಾದ ವೇಳೆ ಅವರಿಗೆ ಕಾರ್ಸಿನೋಮ ಎಂಬ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.  

ಕೀಮೋಥೆರಪಿ ಚಿಕಿತ್ಸೆ ಪಡೆದ ನಂತರದ ಫಾಲೋಅಪ್ ಇಂಜೆಕ್ಷನ್ ಪಡೆಯಲು ಖರ್ಚು ಮಾಡಿದ ಹಣವನ್ನು ಮರು ಪಾವತಿಗಾಗಿ ವಿಮಾ‌ ಕಂಪನಿಗೆ ಕ್ಲೇಮು ಮಾಡಿದ್ದಾರೆ. ಆದರೆ, ಕಂಪನಿ ಪಾಲಿಸಿಯಲ್ಲಿ ದಿನದ (ಡೇ ಕೇರ್) ಚಿಕಿತ್ಸಾ ವಿಧಾನದಲ್ಲಿ ಪಡೆಯುವ ಇಂಜೆಕ್ಷನ್‌ಗೆ ಖರ್ಚಾಗುವ ಹಣ ಮರು ಪಾವತಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು.ಅದಕ್ಕೆ ನ್ಯಾಯಪೀಠ, ಈ ಇಂಜೆಕ್ಷನ್ ಗಳು ಕಿಮೋಥೆರಪಿ ಚಿಕಿತ್ಸೆಗೆ ಸಂಬಂಧವಿಲ್ಲವೇ? ವಿಮಾ‌‌ ಕಂಪನಿಯ ಈ ನೀತಿ ನಿಜಕ್ಕೂ ಅನ್ಯಾಯ, ಇದು‌ ಸಮಂಜಸವಲ್ಲದ ಹಾಗೂ ತಾರತಮ್ಯ ನೀತಿಯಾಗಿದೆ. ವಿಮಾ‌ ಕಂಪನಿಯೂ ಈ ಮಾದರಿಯಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸುವ ಮೂಲಕ‌ ಅಸಮಾಧಾನ ಹೊರಹಾಕಿತು.

ವಿಮಾ ಕಂಪನಿ ಪರ ವಕೀಲರು, ವಿಮಾ ನೀತಿ ತನ್ನದೇ ಆದ ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಅದನ್ನು ಮೀರಲು ಸಾಧ್ಯವಾಗುವುದಿಲ್ಲ‌ ಎಂದು ಉತ್ತರಿಸಿದರು.

10 ಪಟ್ಟು ಅಧಿಕ ಮೊತ್ತ ದಂಡದ ಎಚ್ಚರಿಕೆ:

ಇದರಿಂದ ಮತ್ತಷ್ಟು ಆಕ್ರೋಶಗೊಂಡ ನ್ಯಾಯಪೀಠ, ಹಾಗಾದರೆ ಈ ನ್ಯಾಯಾಲಯ ನಿಮ್ಮ ವಿಮಾ ನೀತಿ ಮತ್ತು ಅದರ ನಿಬಂಧನೆಗಳ ಬಗ್ಗೆ ವ್ಯವಹರಿಸಬೇಕಾಗುತ್ತದೆ. ಪಾಲಿಸಿದಾರನಿಗೆ ನೀವು ಪಾವತಿಸಬೇಕಾದ ಮೊತ್ತದ ಪ್ರಮಾಣದ 10 ಪಟ್ಟು ಅಧಿಕ‌ ಮೊತ್ತವನ್ನು ದಂಡ ವಿಧಿಸುತ್ತದೆ. ನಿಮ್ಮ‌ ಪಾಲಿಸಿ ನೀತಿಯನ್ನು ನ್ಯಾಯಾಲಯ ಪರಾಮರ್ಶೆಗೆ ಒಳಪಡಿಸಲಿದೆ.‌ ಝೋಲಾಡೆಕ್ಸ್ ಮತ್ತು ಎಕ್ಸ್ ಗೆವಾ ಇಂಜೆಕ್ಷನ್ ಕಿಮೋಥೆರಪಿ ಹಾಗೂ ಕಾರ್ಸಿನೋಮಗೆ ಸಂಬಂಧಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯಕ್ಕೆ ನೀವು ಹೇಳಿ ಎಂದು ಗದರಿತು. 

ವಿಮಾ ಪಾಲಿಸಿ ಮಾರಾಟದ ವೇಳೆ ಮತ್ತು ವಿಮಾ ಕಂತು ಸ್ವೀಕರಿಸುವಾಗ ಪಾಲಿಸಿ ಬಹಳ ಅನುಕೂಲಕರ ಹಾಗೂ ಅತ್ಯುತ್ತಮ ಎಂದು ಹೇಳುತ್ತೀರಿ.‌ ಆದರೆ, ಕೊನೆಯ ಸಾಲಿನಲ್ಲಿ ಪಾಲಿಸಿಯು ಕೆಲ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಬರೆದಿರುತ್ತೀರಿ. ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಪಾಲಿಸಿದಾರನನ್ನು ನಡೆದುಕೊಳ್ಳುವ ರೀತಿ ಇದೇನಾ? ನಿಮ್ಮ ಯಾವುದಾದರೂ ವಿನಾಯ್ತಿಗಳಿದ್ದರೆ, ಕ್ಲೇಮು ಮಾಡಿ. ಅದು ಬಿಟ್ಟು ಇಷ್ಟು ಅಮಾನವೀಯವಾಗಿ ನಡೆದುಕೊಳ್ಳಬೇಡಿ ಎಂದು ಛೀಮಾರಿ ಹಾಕಿತು. 

 ಅಂತಿಮವಾಗಿ ಝೋಲಾಡೆಕ್ಸ್ ಮತ್ತು ಎಕ್ಸ್ ಗೆವಾ ಇಂಜೆಕ್ಷನ್ ಗಳು ಕಿಮೋಥೆರಪಿ ಹಾಗೂ ಕಾರ್ಸಿನೋಮ ಚಿಕಿತ್ಸೆಗೆ ಸಂಬಂಧವಿಲ್ಲ ಎಂಬುದನ್ನು ದೃಢಪಡಿಸುವ ದಾಖಲೆಗಳನ್ನು ವಿಮಾ ಕಂಪನಿಯು ಕೋರ್ಟ್ ಗೆ ಒಂದು ವಾರದಲ್ಲಿ ಸಲ್ಲಿಸಬೇಕು. ಇಲ್ಲವಾದರೆ ವಿಮಾ‌ ಕಂಪನಿಯು ತನ್ನ ದುರುದ್ದೇಶಪೂರಿತ ನಡೆಗೆ ಪ್ರತಿಕೂಲ‌ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯಬಾರದು
ವೇಶ್ಯಾವಾಟಿಕೆಯ ಆಮಿಷವೊಡ್ಡಿಸುಲಿಗೆ : 11 ಆರೋಪಿಗಳ ಬಂಧನ