ಬೆಂಗಳೂರು : ಲೊಕಾಂಟೊ ಆ್ಯಪ್ ಮೂಲಕ ಸಾರ್ವಜನಿಕರಿಗೆ ವೇಶ್ಯಾವಾಟಿಕೆಯ ಆಮಿಷವೊಡ್ಡಿ ಸುಲಿಗೆ ಮಾಡುತ್ತಿದ್ದ 11 ಆರೋಪಿಗಳನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ನಗರದ ವೈಟ್‌ಫೀಲ್ಡ್‌ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದರು. ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಲೈವ್ ಲೊಕೇಶನ್ ಕಳುಹಿಸಿದ್ದರು
ದೂರುದಾರಿಗೆ ಆರೋಪಿಗಳು ಲೈವ್ ಲೊಕೇಶನ್ ಕಳುಹಿಸಿದ್ದರು. ಆರೋಪಿಗಳು ನೀಡಿದ್ದ ವಿಳಾಸವಾದ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ 1ನೇ ಹಂತದ ಎಚ್‌ಬಿಆರ್ ಲೇಔಟ್‌ಗೆ ದೂರುದಾರರು ಹೋಗಿದ್ದರು. ಆಟೋದಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರನ್ನು ತೋರಿಸಿದ್ದ ಆರೋಪಿಗಳು ಹಣದ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಹಣ ಕಳೆದುಕೊಂಡ ವ್ಯಕ್ತಿ ನೀಡಿದ್ದ ದೂರು ಆಧರಿಸಿ, ಎಚ್‌ಬಿಆರ್ ಲೇಔಟ್‌ನ ವಿವಿಧೆಡೆ ನೆಲಸಿದ್ದ 11 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2 ಆಟೋ, 4 ಬೈಕ್‌ಗಳು, 13 ಮೊಬೈಲ್ ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
‘ಹೊರ ರಾಜ್ಯದ ಮಹಿಳೆಯರನ್ನು ರಾಜ್ಯಕ್ಕೆ ಕರೆತಂದು ವಿವಿಧೆಡೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸುತ್ತಿದ್ದೆವು. ಆ ಮಹಿಳೆಯರ ಫೋಟೊಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ, ಗ್ರಾಹಕರನ್ನು ಸಂಪರ್ಕಿಸುತ್ತಿದ್ದೆವು. ಸಂಪರ್ಕ ಮಾಡಿದ್ದ ಗ್ರಾಹಕರಿಗೆ ವೇಶ್ಯಾವಾಟಿಕೆಯ ಆಮಿಷವೊಡ್ಡಿ ಸುಲಿಗೆ ಮಾಡಿದ್ದೆವು ಎಂಬುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಮಾಹಿತಿ ಸಿಕ್ಕ ಬಳಿಕ ದೂರು ನೀಡಿ
ವೇಶ್ಯಾವಾಟಿಕೆ ಅಥವಾ ಇತರೆ ಅಕ್ರಮ ಸೇವೆಗಳನ್ನು ಒದಗಿಸುವುದಾಗಿ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತಿಗೆ ಜನರು ಸ್ಪಂದಿಸಬಾರದು. ಅಂತಹ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ತುರ್ತು ಸಹಾಯವಾಣಿಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
