ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳಕರ್ ಸೋಮವಾರ ನಾಮಪತ್ರ ಸಲ್ಲಿಸಿದರು. ಕುಟುಂಬ ಸದಸ್ಯರ ಜೊತೆಗೂಡಿ ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮೃಣಾಲ್ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಒಂದೇ ದಿನ ನಾಲ್ಕು ಬಾರಿ ನಾಮಪತ್ರ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಮೊದಲ ಸೆಟ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರೆ, ಎರಡನೇ ಬಾರಿಗೆ ರಾಮದುರ್ಗದ ಶಾಸಕ ಅಶೋಕ ಪಟ್ಟಣ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಉಪಸ್ಥಿತರಿದ್ದರು. ಮೂರನೇ ಬಾರಿಗೆ ನಾಮಪತ್ರ ಸಲ್ಲಿಸುವಾಗ ಶಾಸಕರಾದ ಲಕ್ಷ್ಮಣ ಸವದಿ, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಧೀರಜ್ ದೇಶಮುಖ, ರಾಜು ಕಾಗೆ ಉಪಸ್ಥಿತರಿದ್ದರೆ, ನಾಲ್ಕನೇ ಬಾರಿಗೆ ನಾಮಪತ್ರ ಸಲ್ಲಿಸುವಾಗ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ , ಶಾಸಕರಾದ ವಿಶ್ವಾಸ್ ವೈದ್ಯ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ಗೋಕಾಕ ಕ್ಷೇತ್ರದ ಮುಖಂಡ ಮಹಾಂತೇಶ ಕಡಾಡಿ ಉಪಸ್ಥಿತರಿದ್ದರು.
ನಾಯಕರ ದಂಡು:ನಾಮಪತ್ರ ಸಲ್ಲಿಕೆಗೆ ಗಣ್ಯರ ದಂಡೇ ಹರಿದು ಬಂದಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ, ರಾಜು ಕಾಗೆ, ವಿಶ್ವಾಸ ವೈದ್ಯ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ರಾಜು ಸೇಠ್, ಮಹಾರಾಷ್ಟ್ರದ ಲಾತೂರ್ ಶಾಸಕ ಧೀರಜ್ ದೇಶಮುಖ್, ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಲಕ್ಷ್ಮಣ ರಾವ್ ಚಿಂಗಳೆ, ಮಾಜಿ ಸಚಿವ ಶಶಿಕಾಂತ ನಾಯಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸಹಸ್ರಾರು ಕಾರ್ಯಕರ್ತರೊಂದಿಗೆ ಸಿಪಿಎಡ್ ಮೈದಾನದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಸುಮಾರು ಒಂದುವರೆ ಕಿಮೀ ವರೆಗೆ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಜೈಕಾ ಹಾಕುತ್ತಿದ್ದ ಜನಸ್ತೋಮ, ಕಲಾ ತಂಡಗಳು, ಎಲ್ಲಡೆ ಕಾಂಗ್ರೆಸ್ ಧ್ವಜಗಳು ಮೆರವಣಿಗೆಗೆ ರಂಗು ತಂದವು. ಮೃಣಾಲ್ ಹೆಬ್ಬಾಳಕರ್ ಭಾವಚಿತ್ರ ಹಿಡಿದು ಸಾಗಿದ ಕಾರ್ಯಕರ್ತರು ಹೆಗಲ ಮೇಲೆ ಕಾಂಗ್ರೆಸ್ ಧ್ವಜಗಳು ರಾರಾಜಿಸಿದವು. ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೇ ಅಪಾರ ಸಂಖ್ಯೆಯ ಬೆಂಬಲಿಗರು ಬೆಳಗಾವಿಗೆ ಲಗ್ಗೆ ಇಟ್ಟಿದ್ದರು.
ನಾಮಪತ್ರ ಸಲ್ಲಿಕೆ ವೇಳೆ ಬೆಳಗಾವಿಯಲ್ಲಿ ಕಂಡು ಬಂದ ಜನ ದಟ್ಟಣೆ ಚುನಾವಣೆಗೆ ಮುನ್ನವೇ ಪಕ್ಷದ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿತು. ಬೆಳಗಾವಿ ಲೋಕಸಭೆ ಕ್ಷೇತ್ರದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಗ್ರಾಮೀಣ ಭಾಗದ ಮಹಿಳೆಯರು ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಪಕ್ಷದ ಚಿಹ್ನೆ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ರ‍್ಯಾಲಿ ಮುಕ್ತಾಯಗೊಂಡ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಚುನಾವಣೆ ರ‍್ಯಾಲಿ ಮುಕ್ತಾಯಗೊಂಡಿದೆ. ಮೇ 7ರವರೆಗೂ ವಿಜಯಯಾತ್ರೆ ನಡೆಸಬೇಕಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು. ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳನ್ನು ಮರುವಶಕ್ಕೆ ಪಡೆಯಲು ಒಗ್ಗಟ್ಟಿನಿಂದ ಹೋರಾಡೋಣ ಎಂದ ಅವರು, ಕಾರ್ಯಕರ್ತರ ಉತ್ಸಾಹ ನೋಡಿದರೆ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಮೃಣಾಲ್ ಹೆಬ್ಬಾಳಕರ್ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಹೇಳಿದರು.