ಗದಗ: ಅಭ್ಯರ್ಥಿಗಳ ಆಸಕ್ತಿ ಹಾಗೂ ಶಿಕ್ಷಣಕ್ಕನುಗುಣವಾಗಿ ಉದ್ಯೋಗ ಪಡೆಯಲು ಎರಡು ದಿನಗಳ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ನಿರುದ್ಯೋಗ ಯುವಜನತೆ ಪಡೆಯಿರಿ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಹಯೋಗದೊಂದಿಗೆ ಸಂಕಲ್ಪ ಯೋಜನೆಯಡಿ ಆಯೋಜಿಸಲಾದ ಎರಡು ದಿನಗಳ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ -2025ನ್ನು ಉದ್ಘಾಟಿಸಿ ಮಾತನಾಡಿದರು. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ 64 ಕ್ಕೂ ಅಧಿಕ ಸಂಸ್ಥೆಯ ಉದ್ಯೋಗದಾತರು ಆಗಮಿಸಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಗದಗ ಜಿಲ್ಲೆಯ ಯುವ ಜನತೆ ಆಧುನಿಕ ಕೃಷಿ, ಆಹಾರ ತಯಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಅವರಿಗೆ ಉದ್ಯೋಗದಾತರು ಕೆಲಸ ನೀಡಿದಲ್ಲಿ ನಿಮ್ಮ ಸಂಸ್ಥೆ ಅಭಿವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ. ಉದ್ಯೋಗ ಮೇಳದಲ್ಲಿ ಈವರೆಗೆ 6243 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ನೋಂದಣಿ ನಡೆದಿದೆ. ಉದ್ಯೋಗದಾತರಿಂದ 21 ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅವುಗಳು ಜಿಲ್ಲೆಯ ಯುವಕರಿಗೆ ದೊರೆಯಲಿ. ಉದ್ಯೋಗ ಮೇಳದ ಉದ್ದೇಶ ಈಡೇರಿಕೆಗಾಗಿ ವೈಜ್ಞಾನಿಕವಾಗಿ ಶ್ರಮವಹಿಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹಾಗೂ ಎಲ್ಲ ಯೋಜನೆಗಳ ಸುಲಲಿತಗೊಳಿಸಿದ ಜಿಪಂ ಸಿಇಓ ಭರತ್ ಎಸ್. ಅವರನ್ನು ಸನ್ಮಾನಿಸಲಾಯಿತು. ಭೀಮಾಂಬಿಕಾ, ಪ್ರಶಾಂತ ಮಾಚೇನಹಳ್ಳಿ, ಮಂಜುಳಾ ಕಟಗಲಿ ಹಾಗೂ ಆನಂದ ಸಿದ್ನಿಕೊಪ್ಪ ಅವರುಗಳಿಗೆ ಇದೇ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲ ಸಂಸ್ಥೆಗಳಿಂದ ಉದ್ಯೋಗದ ಆಫರ್ ಪತ್ರಗಳನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಪ ಶಾಸಕ ಎಸ್.ವಿ. ಸಂಕನೂರ ಮುಂತಾದವರು ಮಾತನಾಡಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಗದಗ-ಬೆಟಗೇರಿ ನಗರಸಭೆಯ ನೂತನ ಅಧ್ಯಕ್ಷ ಕೃಷ್ಣ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ, ಸಿದ್ದು ಪಾಟೀಲ, ಕೃಷ್ಣಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ. ಸಿಇಓ ಭರತ್ ಎಸ್, ಜಿ.ಪಂ.ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ. ಮಲ್ಲೂರ ಬಸವರಾಜ ಹಾಜರಿದ್ದರು.