ನೇಹಾ ಹತ್ಯೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಮೇಣದ ಬತ್ತಿ ಪ್ರತಿಭಟನೆ

KannadaprabhaNewsNetwork |  
Published : Apr 24, 2024, 02:17 AM IST
11 | Kannada Prabha

ಸಾರಾಂಶ

ಒಂದು ಸಮುದಾಯದ ತುಷ್ಟೀಕರಣಕ್ಕಾಗಿ, ತಮ್ಮ ವೋಟ್ ಬ್ಯಾಂಕ್‌ ಗಾಗಿ ರಾಜ್ಯದ ಹೆಣ್ಣು ಮಕ್ಕಳ ಸುರಕ್ಷತೆಯನ್ನೇ ಬಲಿ ಕೊಡುತ್ತಿದೆ. ನೇಹಾಳನ್ನು ವಾಪಸ್ ಕರೆ ತರಲು ಸಾಧ್ಯವಿಲ್ಲ. ಆದರೆ, ಅವಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ತಂದೆ ತಾಯಿಗೆ ನ್ಯಾಯ ಸಿಗಬೇಕಾದರೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿಜೆಪಿ ನಗರ ಮಹಿಳಾ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಮಂಗಳವಾರ ಸಂಜೆ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.

ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಮಾತನಾಡಿ, ನೇಹಾ ಹಿರೇಮಠ್ ಮಾಡಿದ ತಪ್ಪಾದರೂ ಏನು? ಕಾಲೇಜಿಗೆ ಹೋದ ಯುವತಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ರಾಜ್ಯ ಸರ್ಕಾರ ತಮ್ಮ ವೋಟ್ ಬ್ಯಾಂಕ್‌ ಗಾಗಿ ಆರೋಪಿಯ ಬಗ್ಗೆ ಮೃದು ಧೋರಣೆ ತಾಳಿದೆ. ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ವಿಷಯ ಬಂದಾಗ ಅಸಡ್ಡೆ ಮನೋಭಾವ ಹೊಂದಿದೆ ಎಂದು ಆರೋಪಿಸಿದರು.

ಒಂದು ಸಮುದಾಯದ ತುಷ್ಟೀಕರಣಕ್ಕಾಗಿ, ತಮ್ಮ ವೋಟ್ ಬ್ಯಾಂಕ್‌ ಗಾಗಿ ರಾಜ್ಯದ ಹೆಣ್ಣು ಮಕ್ಕಳ ಸುರಕ್ಷತೆಯನ್ನೇ ಬಲಿ ಕೊಡುತ್ತಿದೆ. ನೇಹಾಳನ್ನು ವಾಪಸ್ ಕರೆ ತರಲು ಸಾಧ್ಯವಿಲ್ಲ. ಆದರೆ, ಅವಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ತಂದೆ ತಾಯಿಗೆ ನ್ಯಾಯ ಸಿಗಬೇಕಾದರೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧೋರಣೆ ನೋಡಿದರೆ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವಂತೆ ಕಾಣುತ್ತಿಲ್ಲ. ಹತ್ಯೆ ನಡೆದು ಒಂದು ವಾರದ ಬಳಿಕ ಒತ್ತಾಯದ ಮೇರೆಗೆ ನೇಹಾಳ ತಂದೆಯನ್ನು ಮಾತನಾಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಾಂತ್ವನ ಹೇಳುವ ಮನಸ್ಸು, ಸಮಯ ಎರಡೂ ಇಲ್ಲ. ನೇಹಾ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದರೂ ನಮಗೆ ಸರ್ಕಾರದಿಂದ ನ್ಯಾಯ ಸಿಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ, ನಾವು ಆ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಈ ಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ಹೀಗಾಗಿ ಸಿಬಿಐ ಪ್ರಕರಣದ ತನಿಖೆ ನಡೆಸಿ ರಾಜ್ಯದಲ್ಲಿ ಹೆಣ್ಣು ಮಕ್ಕಳ ರಕ್ಷಣೆಯನ್ನು ಖಾತ್ರಿ ಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕಾ, ಪಾಲಿಕೆ ಮಾಜಿ ಸದಸ್ಯೆ ಪ್ರಮೀಳ ಭರತ್ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ