ರೈತ ಮುಖಂಡ ಜಗಜಿತ್ ಸಿಂಗ್ ಬಂಧನ ಖಂಡಿಸಿ ಮೊಂಬತ್ತಿ ಮೆರವಣಿಗೆ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ಪಂಜಾಬಿನ ಕನೋರಿ ಹಾಗೂ ಶಂಭು ಬಾರ್ಡರ್ ನಲ್ಲಿ ಕಳೆದ ಒಂದು ವರ್ಷದಿಂದ ದೇಶದ ರೈತರಿಗಾಗಿ ಎಂ ಎಸ್ ಪಿ ಖಾತ್ರಿ ಕಾನೂನು ಜಾರಿ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ ಹಾಗೂ ನೂರಾರು ರೈತ ಮುಖಂಡರ ಬಂಧನ ಖಂಡಿಸಿ, ರೈತ ಸಂಘಟನೆಗಳು ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಚಾಮರಾಜೇಶ್ವರಿ ಉದ್ಯಾನದಿಂದ ಮೊಂಬತ್ತಿ ಹಿಡಿದು ಹೊರಟು ಭುವನೇಶ್ವರಿ ವೃತ್ತದಲ್ಲಿ ತೆರಳಿ ರಾಷ್ಟ್ರೀಯ ಹೆದ್ದಾರಿ ತಡೆದು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ ಮಾತನಾಡಿ, ಪಂಜಾಬಿನ ಕನೋರಿ ಹಾಗೂ ಶಂಭು ಬಾರ್ಡರ್ ನಲ್ಲಿ ಕಳೆದ ಒಂದು ವರ್ಷದಿಂದ ನ್ಯಾಯಯುತ ಹಕ್ಕುಗಳಾದ ಎಂ ಎಸ್ ಪಿ ಕಾಯ್ದೆ ಗ್ಯಾರಂಟಿ ಕಾನೂನು ಜಾರಿ, ದೇಶದ ರೈತರ ಸಂಪೂರ್ಣ ಸಾಲ ಮನ್ನಾ, 60 ವರ್ಷ ತುಂಬಿದ ರೈತರಿಗೆ ಪೆನ್ಶನ್ (ಮಾಸಾಶನ) ಎಂಬಿತ್ಯಾದಿ ಜಾರಿ ಮಾಡುವಂತೆ ಒತ್ತಾಯಿಸಿ ಚಳುವಳಿ ನಡೆಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಹಾಗೂ ನೂರಾರು ರೈತ ಮುಖಂಡರನ್ನು ಬಂಧಿಸಿ ಚಳುವಳಿಯನ್ನು ವಿಫಲಗೊಳಿಸಲು ಯತ್ನಿಸುತ್ತಿರುವ ಪಂಜಾಬ್ ಹಾಗೂ ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.

ಕೂಡಲೇ ಬಂಧನ ಮಾಡಿರುವ ರೈತರ ಬಿಡುಗಡೆ ಮಾಡಬೇಕು, ಹಾಗೂ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಕೇಂದ್ರ ಸರ್ಕಾರ ಹಾಗೂ ಪಂಜಾಬ್ ಸರ್ಕಾರಗಳ ದಬ್ಬಾಳಿಕೆ, ದೌರ್ಜನ್ಯ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಂದು ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ಪಂಜಾಬ್ ಸರ್ಕಾರಕ್ಕೆ ಎಚ್ಚರಿಸುತ್ತಾ, ಕಡೆಗಣಿಸಿದರೆ ದಕ್ಷಿಣ ಭಾರತದ ರೈತ ಸಂಘಟನೆಗಳು ಪಂಜಾಬ್ - ಹರಿಯಾಣದ ರೈತರ ಜೊತೆಗೂಡಿ ಪಂಜಾಬ್ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಮೂಡ್ಲು ಪುರ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ನಂಜದೇವನಪುರ ಸತೀಶ್ , ತಾಲೂಕು ಕಾರ್ಯದರ್ಶಿ ಉಡಿಗಾಲ ಸುಂದ್ರಪ್ಪ, ವೀರನಪುರ ಗುರುಸ್ವಾಮಿ, ಎಚ್ ಮೂಕಳ್ಳಿ ಗೌಡ್ರ, ಶಿವಕುಮಾರ್, ಹಿಟ್ಟಿಗೆ ಹಟ್ಟಿ ನಾಗಣ್ಣ, ಟ್ಯಾಕ್ಟರ್ ಮಹೇಶ್, ಎಂಪಿ ಮಹದೇವಪ್ಪ, ಎಂ ಬಿ ರಾಜು ಯರಿಯೂರು, ಮಹೇಶ್ ಭಾಗವಹಿಸಿದ್ದರು.

Share this article