ಪಹಲ್ಗಾಮ್‌ ಉಗ್ರ ದಾಳಿ ಖಂಡಿಸಿ ಮೇಣದ ಬತ್ತಿ ಮೆರವಣಿಗೆ

KannadaprabhaNewsNetwork | Published : Apr 25, 2025 11:53 PM

ಸಾರಾಂಶ

ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಮೇಣದ ಬತ್ತಿ ಮೆರವಣಿಗೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರುಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಮೇಣದ ಬತ್ತಿ ಮೆರವಣಿಗೆಯನ್ನು ನಡೆಸಲಾಯಿತು.ಸ್ಥಳೀಯ ತೀನ್‌ ಖಂದಿಲ್‌ ವೃತ್ತದಲ್ಲಿ ಸೇರಿದ ಡಿಸಿಸಿ ನಾಯಕರು,ಮುಖಂಡರು, ಕಾರ್ಯಕರ್ತರು ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಮೆರವಣಿಗೆ ನಡೆಸಿದರು. ತೀನ್‌ ಖಂದಿಲ್‌ನಿಂದ ಆರಂಭಗೊಂಡ ಮೆರವಣಿಗೆ ಭಗತ್‌ಸಿಂಗ್‌ ವೃತ್ತ, ಜಾಕೀರ್‌ ಹುಸೇನ್‌ ವೃತ್ತ, ಜಿಲ್ಲಾ ಕೇಂದ್ರ ಕಾರಾಗೃಹ, ಮಹಾನಗರ ಪಾಲಿಕೆ, ಕೇಂದ್ರ ಬಸ್‌ ನಿಲ್ದಾಣದ ಮುಖಾಂತರ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತಕ್ಕೆ ಬಂದು ತಲುಪಿತು. ಈ ವೇಳೆ ಮಾತನಾಡಿದ ಡಿಸಿಸಿ ಪ್ರಮುಖರು ಪಹಲ್ಗಾಂನಲ್ಲಿ ನಾಗರಿಕರು ಮತ್ತು ಪ್ರವಾಸಿಗರ ಮೇಲೆ ನಡೆದ ಈ ಭೀಕರ ಹತ್ಯಾಕಾಂಡವು ಸುಸಂಸ್ಕøತ ಸಮಾಜದಲ್ಲಿ ಸ್ಥಾನವಿಲ್ಲದ ಹೇಯ ಕೃತ್ಯವಾಗಿದ್ದು,ಇದು ಖಂಡನಾರ್ಹ. ಈ ದುರಂತದಿಂದ ಸಂತ್ರಸ್ತರಾದ ಎಲ್ಲ ಕುಟುಂಬಗಳಿಗೆ ಪಕ್ಷದಿಂದ ಸಾಂತ್ವಾನ ಸೂಚಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಗಿರುವುದರಿಂದ ಕೇಂದ್ರ ಸರ್ಕಾರ ತಕ್ಷಣವೇ ಸಂತ್ರಸ್ತರ ಕುಟುಂಬಗಳಿಗೆ ವೈದ್ಯಕೀಯ, ಆರ್ಥಿಕ ಮತ್ತು ಭಾವನಾತ್ಮಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.ಈ ಕ್ರೂರ ದಾಳಿಯು ಭದ್ರತೆ ಮತ್ತು ಗುಪ್ತಚರ ಇಲಾಖೆಯಲ್ಲಿನ ಲೋಪಗಳ ಪರಿಶೀಲನೆಯೊಂದಿಗೆ ಸುಸಂಬದ್ಧ ಮತ್ತು ದೃಢವಾಡ ಪ್ರತಿಕ್ರಿಯೆಯನ್ನು ಬಯಸುತ್ತದೆ. ಇದರ ಹಿಂದಿರುವ ದುಷ್ಕರ್ಮಿಗಳು ಮತ್ತು ಯೋಜನಕರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಆರ್ಟಿಕಲ್ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿದೆ. ಕೇಂದ್ರ ಸರ್ಕಾರವು ತುರ್ತಾಗಿ ರಾಜ್ಯ ಸರ್ಕಾರ ಮತ್ತು ಎಲ್ಲ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸಿ ವ್ಯಾಪರ ಶ್ರೇಣಿಯ ವಿಶ್ವಾಸ ನಿರ್ಮಾಣ ಕ್ರಮಗಳನ್ನು ಪ್ರಾರಂಭಿಸಬೇಕು. ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ಸಹಜತೆ ಪುನರ್ ಸ್ಥಾಪಿಸಲು ಜನರ ಸುರಕ್ಷತೆ, ನಂಬಿಕೆ ಮತ್ತು ಪ್ರಜಸತ್ತಾತ್ಮಕ ಹಕ್ಕುಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಂಎಲ್ಸಿ ಎ.ವಸಂತ ಕುಮಾರ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿಸಿ ಅಧ್ಯಕ್ಷ ಬಸವರಾಜ ಪಾಟೀಲ್‌ ಇಟಗಿ, ಮುಖಂಡರಾದ ಕೆ.ಶಾಂತಪ್ಪ, ರಾಮಣ್ಣ ಹಿರಬರೇಗಾ, ರವಿ ಬೋಸರಾಜು, ಡಾ.ರಜಾಕ ಉಸ್ತಾದ್, ಶ್ರೀದೇವಿ ನಾಯಕ,ಬಸವರಾಜ ಸೇರಿದಂತೆ ಪಕ್ಷದ ಹಿರಿಯ-ಕಿರಿಯ ಮುಖಂಡರು,ಕಾರ್ಯಕರ್ತರು ಇತರರು ಇದ್ದರು.

Share this article