15-19 ಸಾವಿರಕ್ಕೆ ಐಪಿಎಲ್ ಟಿಕೆಟ್ಮಾರುತ್ತಿದ್ದ ಕ್ಯಾಂಟೀನ್‌ ನೌಕರ ಸೆರೆ

KannadaprabhaNewsNetwork |  
Published : Apr 17, 2026, 03:45 AM ISTUpdated : Apr 17, 2026, 08:59 AM IST
 IPL 2026

ಸಾರಾಂಶ

ಕಾಳ ಸಂತೆಯಲ್ಲಿ ಐಪಿಎಲ್ ಮಾರಾಟ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ಈಗ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕಿಳಿದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್‌ ನೌಕರನೊಬ್ಬ ಬಂಧಿತನಾಗಿದ್ದಾನೆ.

 ಬೆಂಗಳೂರು :  ಕಾಳ ಸಂತೆಯಲ್ಲಿ ಐಪಿಎಲ್ ಮಾರಾಟ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ಈಗ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕಿಳಿದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್‌ ನೌಕರನೊಬ್ಬ ಬಂಧಿತನಾಗಿದ್ದಾನೆ.

ಚಿನ್ನಸ್ವಾಮಿ ಕ್ರೀಡಾಂಗಣದ ಶ್ರೀ ಲಕ್ಷ್ಮೀ ಕ್ಯಾಂಟರ್ಸ್‌ನ ಕೆಲಸಗಾರ ಪಿ. ಚಂದ್ರಶೇಖರ್‌ ಬಂಧಿತನಾಗಿದ್ದು, ಆರೋಪಿ ಬಳಿ 100ಕ್ಕೂ ಹೆಚ್ಚು ಐಪಿಎಲ್‌ ಟಿಕೆಟ್‌ಗಳು ಜಪ್ತಿಯಾಗಿವೆ.

ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಸದಸ್ಯ ಎನ್ನಲಾದ ಗಣೇಶ್‌ ಹರಿಕೇಶ್‌ ಪತ್ತೆಗೆ ಸಿಸಿಬಿ ತನಿಖೆ ಮುಂದುವರಿಸಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ಮಧ್ಯೆ ಬುಧವಾರ ನಡೆದ ಪಂದ್ಯದ ವೇಳೆ ಟಿಕೆಟ್‌ ಮಾರುತ್ತಿದ್ದಾಗ ಆರೋಪಿಯನ್ನು ಸಿಸಿಬಿ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿ ಟಿಕೆಟ್ ₹15-19 ಸಾವಿರ!

ಐಪಿಎಲ್ ಪಂದ್ಯಾವಳಿ ವೇಳೆ ಕಾಳಸಂತೆಯಲ್ಲಿ ಟಿಕೆಟ್ ಮಾರಾಟದ ಮೇಲೆ ಸಿಸಿಬಿ ನಿಗಾ ವಹಿಸಿದೆ. ಅಂತೆಯೇ ಬುಧವಾರ ಸಹ ಕ್ರೀಡಾಂಗಣದ ಬಳಿ ಸಿಸಿಬಿ ಕಾರ್ಯಾಚರಣೆಗಿಳಿದಿತ್ತು. ಆಗ ಸಂಪಂಗಿರಾಮನಗರದ ಬಳಿ ಟಿಕೆಟ್‌ ಮಾರುತ್ತಿದ್ದ ಚಂದ್ರಶೇಖರ್‌ ಸಿಸಿಬಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಗಣೇಶ್ ಹೆಸರನ್ನು ಆತ ಬಾಯ್ಬಿಟ್ಟಿದ್ದಾನೆ.

ನನಗೆ ಕೆಎಸ್‌ಸಿಎ ಸದಸ್ಯ ಎನ್ನಲಾದ ಗಣೇಶ್‌ ಹರಿಕೇಶ್‌ ಅವರು ಮಾ.28ರಂದು ನಡೆದ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವಣ ಪಂದ್ಯದ 81 ಹಾಗೂ ಎಲ್‌ಎಸ್‌ಜಿ ಮತ್ತು ಆರ್‌ಸಿಬಿ ಪಂದ್ಯದ 100 ಟಿಕೆಟ್‌ಗಳನ್ನು ನೀಡಿದ್ದರು. ಈ ಟಿಕೆಟ್‌ಗಳನ್ನು 15 ರಿಂದ 19 ಸಾವಿರ ರು.ಗೆ ಮಾರುವಂತೆ ಗಣೇಶ್ ಸೂಚಿಸಿದ್ದರು ಎಂದು ಆರೋಪಿ ಹೇಳಿರುವುದಾಗಿ ತಿಳಿದು ಬಂದಿದೆ.

ಕಂಪನಿಗಳ ವಿರುದ್ಧ ಎಫ್‌ಐಆರ್ 

ಐಪಿಎಲ್ ಟಿಕೆಟ್ ಅಕ್ರಮವಾಗಿ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇರೆಗೆ ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ವಿರುದ್ಧ ಸಿಸಿಬಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಪ್ರತಿ ಪಂದ್ಯಕ್ಕೆ 50 ರಿಂದ 100 ಟಿಕೆಟ್‌ಗಳನ್ನು ಸ್ವಸ್ತಿಕ್‌ ಹೆವಿ ಎಂಜಿನಿಯರಿಂಗ್‌ ಕಂಪನಿ ಹಾಗೂ ಧರಣಿ ಕಂಪ್ಯೂಟರ್ಸ್‌ ಕಂಪನಿಗಳು ಖರೀದಿಸಿದ್ದವು. ಆದರೆ ಆನಂತರ ಈ ಟಿಕೆಟ್‌ಗಳನ್ನು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಆ ಕಂಪನಿಗಳ ಯತ್ನಿಸಿವೆ ಎಂದು ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಸತ್ತ ಐಪಿಎಲ್ ಋತುವಿನಲ್ಲಿ ಕಾಳ ಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಸಂಬಂಧ 10 ಪ್ರಕರಣಗಳು ದಾಖಲಾಗಿವೆ. ಅಕ್ರಮವಾಗಿ ಟಿಕೆಟ್ ಮಾರಾಟಕ್ಕೆ ಯತ್ನಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ.

-ಶ್ರೀಹರಿಬಾಬು, ಡಿಸಿಪಿ, ಸಿಸಿಬಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ