ಸ್ನಾತಕೋತ್ತರ ಪದವಿ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ ಕಾರ್ಯಾಗಾರ

KannadaprabhaNewsNetwork | Published : Oct 29, 2024 12:52 AM

ಸಾರಾಂಶ

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗದ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಕಾರ್ಯಾಗಾರ- ‘ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ’ ಶನಿವಾರ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಸಮಾರೋಪಗೊಂಡಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗದ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಕಾರ್ಯಾಗಾರ- ‘ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ’ ಶನಿವಾರ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಸಮಾರೋಪಗೊಂಡಿತು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಂಶೋಧನಾ ಕ್ಷೇತ್ರದ ನಾವಿನ್ಯತೆಗಳ ಕುರಿತು ತಿಳಿದುಕೊಳ್ಳಲು ಆಯೋಜಿಸಿದ ಈ ಕಾರ್ಯಾಗಾರವು ಹೆಚ್ಚು ಅರ್ಥಪೂರ್ಣವಾಗಬೇಕಾದರೆ ಭಾಗವಹಿಸಿದ ಫಲಾನುಭವಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಗಹನವಾಗಿ ಅಧ್ಯಯನ ನಡೆಸಿ, ಸಂಶೋಧನೆಯನ್ನು ಇನ್ನಷ್ಟು ಮೌಲ್ಯಯುತಗೊಳಿಸಬೇಕು ಎಂದರು. ಮೂರು ದಿನಗಳ ಕಾರ್ಯಾಗಾರದಲ್ಲಿ ಲೇಖನ ಪ್ರಕಟಣೆ, ಕ್ಲಿನಿಕಲ್ ಸಂಶೋಧನೆ, ಜೌಷಧ ಸಂಶೋಧನೆ, ಸಾಹಿತ್ಯ ಸಂಶೋಧನೆ, ಹಾಗೂ ಪ್ರಾಣಿ ಪ್ರಯೋಗಗಳು ಮುಂತಾದ ವಿಷಯಗಳ ಕುರಿತು ದೇಶದಾದ್ಯಂತದಿಂದ ಆಗಮಿಸಿದ ೧೦ ಸಂಪನ್ಮೂಲ ವ್ಯಕ್ತಿಗಳು ಒಟ್ಟು ೨೦ ಅಧಿವೇಶನಗಳಲ್ಲಿ ಮಾಹಿತಿ ನೀಡಿದರು. ದೇಶದ ೧೦ ವಿವಿಧ ಆಯುರ್ವೇದ ಕಾಲೇಜುಗಳಿಂದ ೫೯ ಜನ ಸಂಶೋಧನಾ ಮಾರ್ಗದರ್ಶಿಗಳು ಭಾಗವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಕಣ್ಣೂರು ಆಯುರ್ವೇದ ಕಾಲೇಜು, ಎಸ್‌ಡಿಎಮ್ ಆಯುರ್ವೇದ ಕಾಲೇಜು ಉಡುಪಿ, ಕರ್ನಾಟಕ ಆಯುರ್ವೇದ ಕಾಲೇಜು ಮಂಗಳೂರು, ಕೆವಿಜಿ ಕಾಲೇಜು ಸುಳ್ಯ, ಎಸ್‌ಡಿಎಮ್ ಆಯುರ್ವೇದ ಕಾಲೇಜು, ಹಾಸನ, ಜೆಎಸ್‌ಎಸ್ ಎಸ್‌ಡಿಎಮ್ ಆಯುರ್ವೇದ ಕಾಲೇಜು, ಮೈಸೂರು, ಇಂಚಲ ಎಸ್‌ಡಿಎಮ್ ಆಯುರ್ವೇದ ಕಾಲೇಜಿನ ಪ್ರತಿನಿಧಿಗಳು ಅನಿಸಿಕೆ ವ್ಯಕ್ತಪಡಿಸಿದರು. ಆಗಮಿಸಿದ ಸಂಶೋಧನಾ ಮಾರ್ಗದರ್ಶಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ ಸಜಿತ್ ಎಂ ಅಧ್ಯಕ್ಷತೆ ವಹಿಸಿದ್ದರು. ಮುಂಬೈನ ಡಿ ವೈ ಪಾಟೀಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ ಕವಿತಾ ಜಾಧವ್ ಇದ್ದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ ಮಂಜುನಾಥ ಭಟ್ ಸ್ವಾಗತಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ ರವಿಪ್ರಸಾದ ಹೆಗ್ಡೆ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ ಸ್ಮಿತಾ ಸೂರಜ್ ನಿರೂಪಿಸಿದರು.

Share this article