ಫಿಲಿಪ್ಸ್‌ ಎಂಜಿನಿಯರ್‌ಗಳಿಗೆ ಕೆಎಂಸಿಯಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ

KannadaprabhaNewsNetwork | Published : Jun 18, 2024 12:52 AM

ಸಾರಾಂಶ

ಈ ಕಾರ್ಯಾಗಾರವು ವಿಶೇಷವಾಗಿ ಹೃದಯದಲ್ಲಿ ವಿದ್ಯುತ್‌ ಕ್ರಿಯೆಯನ್ನು ಪರಿಶೀಲಿಸುವ ಮತ್ತು ಕಾಯಿಲೆಯನ್ನು ನಿರ್ಧರಿಸುವ ವಿಚಾರದ ಬಗ್ಗೆ ಕೇಂದ್ರೀಕೃತವಾಗಿದ್ದು, ಇದು ತಂತ್ರಜ್ಞಾನ ಮತ್ತು ಆರೋಗ್ಯ ಆರೈಕೆಯ ವಿಭಾಗಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮತ್ತು ಭಾಗಿಗಳಾದವರಿಗೆ ಸಮಗ್ರ ಪ್ರಾಯೋಗಿಕ ಅನುಭವವನ್ನು ನೀಡುವ ಕಾರ್ಯಾಗಾರವಾಗಿತ್ತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಇದರ ಸಾಂಸ್ಥಿಕ ಸಂಪರ್ಕ ಕಚೇರಿಯ ವತಿಯಿಂದ ಏಕದಿನ ಚಿಕಿತ್ಸಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬೆಂಗಳೂರಿನ ಫಿಲಿಪ್ಸ್‌ ಇನ್ನೋವೇಶನ್‌ ಸೆಂಟರ್‌ನ ಆ್ಯಂಬುಲೇಟರಿ ಮಾನಿಟರಿಂಗ್‌ ಮತ್ತು ಡಯಗ್ನಿಸ್ಟಿಕ್ಸ್‌ ವಿಭಾಗದ 14 ಮಂದಿ ಎಂಜಿನಿಯರ್‌ಗಳು ಭಾಗವಹಿಸಿದರು.

ಈ ಕಾರ್ಯಾಗಾರವು ವಿಶೇಷವಾಗಿ ಹೃದಯದಲ್ಲಿ ವಿದ್ಯುತ್‌ ಕ್ರಿಯೆಯನ್ನು ಪರಿಶೀಲಿಸುವ ಮತ್ತು ಕಾಯಿಲೆಯನ್ನು ನಿರ್ಧರಿಸುವ ವಿಚಾರದ ಬಗ್ಗೆ ಕೇಂದ್ರೀಕೃತವಾಗಿದ್ದು, ಇದು ತಂತ್ರಜ್ಞಾನ ಮತ್ತು ಆರೋಗ್ಯ ಆರೈಕೆಯ ವಿಭಾಗಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮತ್ತು ಭಾಗಿಗಳಾದವರಿಗೆ ಸಮಗ್ರ ಪ್ರಾಯೋಗಿಕ ಅನುಭವವನ್ನು ನೀಡುವ ಕಾರ್ಯಾಗಾರವಾಗಿತ್ತು.

ಕೆಎಂಸಿಯ ನುರಿತ ಬೋಧಕರು ತರಗತಿಗಳನ್ನು ನಡೆಸಿಕೊಟ್ಟರಲ್ಲದೆ, ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಕಾರ್ಯ ವೈಖರಿ, ಅವುಗಳ ಅನ್ವಯಗಳು, ಮತ್ತು ರೋಗಿಗಳ ಚಿಕಿತ್ಸೆಯ ಸವಾಲುಗಳ ಬಗ್ಗೆ ಭಾಗಿಗಳು ತಿಳಿದುಕೊಂಡರು.

ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹಉಪಕುಲಪತಿ ಡಾ. ನಾರಾಯಣ ಸಭಾಹಿತ್‌ ಅವರು ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ವೈದ್ಯಕೀಯ ವಿಭಾಗಗಳ ನಡುವೆ ಸಂಬಂಧವು ಹೆಚ್ಚಾಗಲಿದ್ದು, ಇಂಜಿನಿಯರ್‌ಗಳನ್ನು ವೈದ್ಯಕೀಯ ಜ್ಞಾನದೊಂದಿಗೆ ಸಿದ್ಧಗೊಳಿಸುವುದರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾರ್ಯಾಗಾವು ಪ್ರಮುಖ ಹೆಜ್ಜೆಯಾಗಿದೆ ಎಂದರು.

ಮಾಹೆಯ ತಾಂತ್ರಿಕ ಮತ್ತು ಯೋಜನಾ ವಿಭಾಗದ ಸಹ ಉಪಕುಲಪತಿ ಡಾ. ಎನ್‌.ಎನ್‌. ಶರ್ಮ ಮಾತನಾಡಿ, ಎರಡೂ ಜ್ಞಾನಶಿಸ್ತುಗಳ ಸಹಭಾಗಿತ್ವದಿಂದಾಗಿ ಅಂತಿಮವಾಗಿ ರೋಗಿಗಳ ಶುಶ್ರೂಷೆಯಲ್ಲಿ ಸುಧಾರಣೆ ತರುವ ಜೀಪಪರ ಧೋರಣೆಯೇ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದರು.

ಮಾಹೆಯ ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿರಾಜ ಎನ್‌.ಎಸ್‌. ಉಪಸ್ಥಿತರಿದ್ದರು. ಕಾರ್ಪೊರೇಟ್‌ ರಿಲೇಶನ್ಸ್‌ ವಿಭಾಗದ ನಿರ್ದೇಶಕ ಡಾ. ಹರೀಶ ಕುಮಾರ್‌ ಸ್ವಾಗತಿಸಿ, ವಂದಿಸಿದರು. ವಿನೋದ್‌ ಸಿ. ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

Share this article