ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯೊಳಗೆ ನುಗ್ಗಿದ ಕಾರು

KannadaprabhaNewsNetwork |  
Published : Jun 12, 2025, 01:04 AM IST
11ಕೆಎಂಎನ್ ಡಿ12 | Kannada Prabha

ಸಾರಾಂಶ

ಕಾರಿನಲ್ಲಿದ್ದ ಮಂಡ್ಯ ವಿನಾಯಕ ಬಡಾವಣೆಯ ಉದಯ್ ಮತ್ತು ಮದ್ದೂರಿನ ಚನ್ನೇಗೌಡ ಬಡಾವಣೆ ಅವಿನಾಶ್ ಗಾಯಗೊಂಡಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮುರಿದು ಕಂಬಕ್ಕೆ ಅಳವಡಿಸಲಾಗಿದ್ದ ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಹಠಾತ್ತನೇ ಕಡಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮನೆಯೊಂದಕ್ಕೆ ನುಗ್ಗಿದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರಲ್ಲದೇ ಓರ್ವ ಬಾಲಕ, ಇಬ್ಬರು ಮಹಿಳೆಯರು ವಿದ್ಯುತ್ ಸ್ಪರ್ಶದಿಂದ ಆಶ್ಚರ್ಯಕರ ರೀತಿ ಪಾರಾಗಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಜರುಗಿದೆ.

ಕಾರಿನಲ್ಲಿದ್ದ ಮಂಡ್ಯ ವಿನಾಯಕ ಬಡಾವಣೆಯ ಉದಯ್ ಮತ್ತು ಮದ್ದೂರಿನ ಚನ್ನೇಗೌಡ ಬಡಾವಣೆ ಅವಿನಾಶ್ ಗಾಯಗೊಂಡಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮುರಿದು ಕಂಬಕ್ಕೆ ಅಳವಡಿಸಲಾಗಿದ್ದ ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಹಠಾತ್ತನೇ ಕಡಿತಗೊಂಡಿದೆ.

ವಿದ್ಯುತ್ ತಂತಿಗಳು ಪಾದಚಾರಿಗಳಾದ ಬಾಲಕ ಶಶಿಧರ, ದೀಪಿಕಾ ಮತ್ತು ಸುಶೀಲಮ್ಮ ಅವರ ಮೇಲೆ ಬಿದ್ದು ಸಣ್ಣಪುಟ್ಟ ರೀತಿಯಲ್ಲಿ ಗಾಯಗೊಂಡು ಆಶ್ಚರ್ಯಕರ ರೀತಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಗ್ರಾಮದ ಉಮೇಶ್ ಎಂಬುವವರ ಮನೆಗೆ ನುಗ್ಗಿದ ಪರಿಣಾಮ ಮನೆ ಅಲ್ಪ ಪ್ರಮಾಣದಲ್ಲಿ ಮನೆ ಜಖಂಗೊಂಡಿದೆ.

ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಉದಯ್ ಚಾಲನೆ ಮಾಡುತ್ತಿದ್ದ ಕಾರು, ತೊರೆಶೆಟ್ಟಿಹಳ್ಳಿ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮನೆಗೆ ನುಗ್ಗಿ ಅಪಘಾತ ಸಂಭವಿಸಿದೆ. ಸ್ಥಳೀಯರು ಮತ್ತು ಹೆದ್ದಾರಿ ವಾಹನ ಸವಾರರು ಅಪಘಾತಕ್ಕೀಡಾದ ಕಾರಿನಲ್ಲಿ ಸಿಲುಕಿದ್ದ ಉದಯ್ ಮತ್ತು ಅವಿನಾಶ್ ರನ್ನು ಹೊರ ತೆಗೆದು ಆ್ಯಂಬುಲೆನ್ಸ್ ನಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಕೆಸ್ತೂರು ಠಾಣೆ ಪಿಎಸ್ಐ ನರೇಶ್ ಹಾಗೂ ಸಿಬ್ಬಂದಿ ಅಪಘಾತಕ್ಕೀಡಾದ ಕಾರನ್ನು ರಸ್ತೆ ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚೆಸ್ಕಾಂಗೆ 1 ಲಕ್ಷ ರು. ಹಾನಿ:

ಕಾರು ಡಿಕ್ಕಿಯಾಗಿ ಮೂರು ಕಾಂಕ್ರೀಟ್ ಕಂಬಗಳು, ವಿದ್ಯುತ್ ತಂತಿ ಮತ್ತಿತರ ಉಪಕರಣಗಳು ಮುರಿದು ಬಿದ್ದು ಚೆಸ್ಕಾಂಗೆ ಸುಮಾರು 1 ಲಕ್ಷ ರು. ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ವಿದ್ಯುತ್ ಕಂಬ, ತಂತಿ ಹಾಗೂ ಹಾನಿಗೊಂಡಿರುವ ಮತ್ತಿತರ ಉಪಕರಣಗಳ ಮತ್ತು ಲೇಬರ್ ಚಾರ್ಜ್ ಮೊತ್ತವನ್ನು ಪಾವತಿ ಮಾಡುವುದಾಗಿ ಅಪಘಾತವೆಸಗಿದ ಕಾರಿನ ಮಾಲೀಕರು ಲಿಖಿತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ, ಒಂದು ವೇಳೆ ನಷ್ಟದ ಮೊತ್ತವನ್ನು ಚೆಸ್ಕಾಂ ಗೆ ಪಾವತಿ ಮಾಡದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚೆಸ್ಕಾಂ ಕೆಸ್ತೂರು ವಿಭಾಗದ ಜ್ಯೂನಿಯರ್ ಇಂಜಿನಿಯರ್ ಸುಧಾ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳ ಪ್ರತಿಷ್ಠೆಯಿಂದ ಗ್ರಾಮಗಳು ಸೊರಗುತ್ತಿವೆ: ಶಾಸಕಿ ಶಾರದಾ ಪೂರ್ಯಾನಾಯ್ಕ್
ಬಿಜೆಪಿ ಮಹಿಳಾ ಮೋರ್ಚಾಗೆ ಸ್ತ್ರೀ ಕಾಳಜಿ ಇಲ್ಲ: ದಿನೇಶ್‌ ಶೆಟ್ಟಿ