ಕೊಪ್ಪಳ:
1995ರ ವಕ್ಫ್ ಕಾಯ್ದೆಗೆ ಅಂಗೀಕರಿಸಿದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಸಂವಿಧಾನದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಈ ಕಾಯ್ದೆ ತಿದ್ದುಪಡಿ ಅಂಗೀಕರಿಸದೆ ರದ್ದುಪಡಿಸಿ ಯಥಾವತ್ತಾಗಿ ಮುಂದವರಿಸಬೇಕೆಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಜಿಲ್ಲಾ ಘಟಕ ಒತ್ತಾಯಿಸಿದೆ.
ಮುಸ್ಲಿಮರ ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಯಥಾವತ್ತಾಗಿ ಮುಂದುವರಿಸಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಕೇಂದ್ರ ಸರ್ಕಾರ ಅಂಗೀಕರಿಸಿರುವ ವಕ್ಫ್ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕೆಂದು ಆಗ್ರಹಿಸಲಾಗಿದೆ.ಈ ತಿದ್ದುಪಡಿಗಳು ಸಂವಿಧಾನದ 14, 25, 26 ಮತ್ತು 29ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಹಿಂದೂ, ಸಿಖ್, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಅಂತಹ ರಕ್ಷಣೆ ಅನುಭವಿಸುತ್ತಿದ್ದು ಕೇವಲ ವಕ್ಫ್ ರಕ್ಷಣೆ ಮತ್ತು ಆಸ್ತಿಗಳಿಗೆ ಲಭ್ಯವಿರುವ ನಿಬಂಧನೆಗಳನ್ನು ಕೊನೆಗೊಳಿಸುವ ಮೂಲಕ ಮುಸ್ಲಿಮರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಮುಸ್ಲಿಂ ಸಮಾಜದ ಧರ್ಮಗುರು, ಯೂಸುಫಿಯ ಮಸೀದಿಯ ಖತಿಬ್ ಇಮಾಮ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೆ.ಎಂ. ಸಯ್ಯದ್, ನಾಸೀರುದ್ದೀನ್ ಇದ್ದರು.