ಬಿ.ಎಚ್.ರಸ್ತೆಯ ಪಾದಚಾರಿ ಮಾರ್ಗದಲ್ಲಿ ಪ್ರತಿಭಟನೆ । 2 ಬಾದಾಮಿ ಮರಗಳ ಕೊಯ್ದಿದ್ದ ದುಷ್ಕರ್ಮಿಗಳು । ಕ್ರಮಕ್ಕೆ ಆಗ್ರಹ
ಅಕ್ರಮವಾಗಿ ಮರಗಳ ಕಡಿತ ಆಗಿದ್ದನ್ನು ವಿರೋಧಿಸಿ ಬುಧವಾರ ಪರಿಸರ ಪ್ರಿಯರು ಘಟನೆ ನಡೆದ ನಗರದ ಬಿ.ಎಚ್.ರಸ್ತೆಯಲ್ಲಿನ ವಿಷ್ಣು ಭವನದ ಎದುರು ಫುಟ್‌ಪಾತ್ ಮೇಲೆಯೇ ಪ್ರತಿಭಟನೆ ನಡೆಸಿದರು.
ಬೆಳೆದು ನಿಂತಿದ್ದ ಎರಡು ಬಾದಾಮಿ ಮರಗಳ ಬುಡಕ್ಕೆ ಯಾರೋ ದುಷ್ಕರ್ಮಿಗಳು ಗರಗಸ ಹಚ್ಚಿ ಧರೆಗುರುಳಿಸಿದ್ದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.ಧರಣಿನಿರತ ಪರಿಸರಪ್ರಿಯ ಪ್ರಮುಖರು ಮಾತನಾಡಿ, ನಗರದಲ್ಲಿ ಈ ರೀತಿಯ ಮರಕಡಿತಲೆ ದುಷ್ಕೃತ್ಯ ಅವ್ಯಾಹತವಾಗಿ ನಡೆದಿದೆ. ಅಂಗಡಿ ಮುಂಗಟ್ಟುಗಳಿಗೆ ಮರೆಯಾಗಿ ಸಾರ್ವಜನಿಕರಿಗೆ ಕಾಣುತ್ತಿಲ್ಲವೆಂದೋ, ಮನೆಯ ಎದುರು ಇರುವ ಮರದ ಎಲೆಗಳು ಕಸ ಹರಡುತ್ತದೆ ಎಂತಲೋ ಹೀಗೆ ಅನೇಕ ಕಾರಣಗಳಿಂದ ಮರಗಳ ಮಾರಣ ಹೋಮ ನಡೆಯುತ್ತಿದೆ ಎಂದು ಆರೋಪಿಸಿದರು.
ಈಗ ಕಡಿತದಿಂದ ನೆಲಕ್ಕುರುಳಿದ ಮರಗಳನ್ನು ತಾವು 2019ರಲ್ಲಿ ನೆಟ್ಟಿದ್ದು, ನಿಯಮಿತವಾಗಿ ಆರೈಕೆ ಮಾಡಿದ್ದರ ಫಲವಾಗಿ ಈಗ ಅತ್ಯಂತ ಸುಂದರವಾಗಿ ಬೆಳೆದು ನಿಂತಿದ್ದವು. ಆದರೆ ರಾತ್ರಿ ದುರುಳರು ಇವುಗಳಿಗೆ ಗರಗಸ ಹಚ್ಚಿ ನೆಲಕ್ಕುರುಳಿಸಿದ್ದಾರೆ. ಒಂದು ಮರವನ್ನು ಗರಗಸದಿಂದ ಅರ್ಧ ಮಾತ್ರ ಕತ್ತರಿಸಿ ಹಾಗೇ ಬಿಟ್ಟು ಹೋಗಿದ್ದಾರೆ. ಯಾವುದೇ ಸಮಯದಲ್ಲಿ ಬೀಳುವ ಅಪಾಯವಿದೆ. ನಮ್ಮ ಪ್ರಕಾರ ಈ ಮರಗಳ ಕೊಲೆಯಾಗಿದೆ. ತಪ್ಪಿತಸ್ಥರನ್ನು ಹುಡುಕಿ ಶಿಕ್ಷಿಸಬೇಕು.
ಒಂದು ಹಂತದಲ್ಲಿ ಅರಣ್ಯ, ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪರಿಸರಪ್ರಿಯರು ಪಟ್ಟು ಹಿಡಿದು ಕಳಿತರು.
ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಕಡಿತದ ಮರಗಳನ್ನು ವೀಕ್ಷಿಸಿ, ಸಿಸಿ ಕ್ಯಾಮೆರಾ ನೋಡಿ ಕಡಿದ ಆರೋಪಗಳು ಯಾರು ಎಂಬುದನ್ನು ಶೋಧಿಸುತ್ತೇವೆ. ಅಪರಾಧಿಗಳನ್ನು ಹಿಡಿಯುತ್ತೇವೆ. ನಗರದಲ್ಲಿ ಪರಿಸರ ಸಂರಕ್ಷಣೆಗೆ ಅರಣ್ಯ ಸಮಿತಿಯನ್ನು ಇನ್ನಷ್ಟು ಜಾಗೃತ ಗೊಳಿಸುತ್ತೇವೆ. ಗಿಡ ಮರಗಳ ಮೇಲೆ ನಿರಂತರ ನಿಗಾ ಇಟ್ಟು ಅವುಗಳನ್ನು ಸಂರಕ್ಷಿಸುವ ಕಾರ್ಯ ಮುಂದುವರಿಸುತ್ತೇವೆ. ಇನ್ನೊಂದು ವಾರದ ಒಳಗಾಗಿ ದುಷ್ಕರ್ಮಿಗಳನ್ನು ಹಿಡಿಯುತ್ತೇವೆ ಎಂಬ ಭರವಸೆಯ ಬಳಿಕ ಪರಿಸರಪ್ರಿಯರು ಧರಣಿ ಹಿಂಪಡೆದರು.