ಕನ್ನಡಪ್ರಭ ವಾರ್ತೆ ಹೊಸಪೇಟೆ
ನಿತ್ಯ 3 ಕಿಮೀ ನಡೆದುಕೊಂಡೇ ಶಾಲೆಗೆ ತೆರಳುವ ವಿದ್ಯಾರ್ಥಿಗಳು! ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಜೂನ್ 11ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಬಿಇಒ ಶೇಖರ ಹೊರಪೇಟೆ ಮತ್ತು ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ, ಸಿಂಗನಾಥನಹಳ್ಳಿಯ ಗ್ರಾಮದ 16 ಮಕ್ಕಳು ಕಡ್ಡಿರಾಂಪುರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರುವ ಹಿನ್ನೆಲೆ ಅವರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಸ್ವತಃ ಬಿಇಒ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ಮರಿಲಿಂಗಪ್ಪ ಜೊತೆಗೆ ಮಾತನಾಡಿ, ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿದ್ದು, ಇದಕ್ಕೆ ಸ್ಪಂದಿಸಬೇಕು. ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕನ್ನಡಪ್ರಭ ವರದಿ ಓದಿರುವ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಕೂಡ, ಡಿಪೋ ಮ್ಯಾನೇಜರ್ ಮರಿಲಿಂಗಪ್ಪ ಅವರಿಗೆ ಫೋನಾಯಿಸಿ, ತಾಲೂಕಿನ ಸಿಂಗನಾಥನಹಳ್ಳಿಯ ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ. ಶಾಲೆಗೆ ಬಿಆರ್‌ಸಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕೂಡ ಪಡೆದಿದ್ದಾರೆ. ಸಿಂಗನಾಥನಹಳ್ಳಿಯ ಗ್ರಾಮದ ಮಕ್ಕಳು ಬಸ್ ಏರಿ ಶಾಲೆಗೆ ಬರುವ ಆಶಾಭಾವ ಮೂಡಿದೆ. ಚಿರತೆ, ಕರಡಿಗಳ ಭೀತಿ ನಡುವೆ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಬಸ್ ವ್ಯವಸ್ಥೆ ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬುದು ಸಿಂಗನಾಥನಹಳ್ಳಿ ಗ್ರಾಮದ ನಿವಾಸಿಗಳ ಆಶಯವಾಗಿದೆ.