ಹೊಚ್ಚ ಹೊಸ ಕಾರ್ ಪಲ್ಟಿ: ಧಾರ್ಮಿಕ ಕ್ಷೇತ್ರಕ್ಕೆ ಹೊರಟಿದ್ದ ಕುಟುಂಬ

KannadaprabhaNewsNetwork | Published : Jun 23, 2024 2:04 AM

ಸಾರಾಂಶ

ಹೊಚ್ಚ ಹೊಸ ಕಾರೊಂದನ್ನು ಖರೀದಿಸಿ, ಕುಟುಂಬಸ್ಥರೊಂದಿಗೆ ಧಾರ್ಮಿಕ ಕ್ಷೇತ್ರ ಮುರುಡೇಶ್ವರಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯೆ ಅಪಘಾತ ಸಂಭವಿಸಿದೆ.,

ಕನ್ನಡಪ್ರಭ ವಾರ್ತೆ ಅಂಕೋಲಾ

ಚಾಲಕನ ನಿಯಂತ್ರಣ ತಪ್ಪಿದ ಹೊಚ್ಚ ಹೊಸ ಕಾರೊಂದು ಹೆದ್ದಾರಿ ಡಿವೈಡರ್ ಬಳಿ ಅಳವಡಿಸಿದ ದಾರಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಬೊಳೆ ಕಿರು ಸೇತುವೆ ಹತ್ತಿರ ಶನಿವಾರ ಬೆಳಗ್ಗೆ ಸಂಭವಿಸಿದೆ.

ಹೈದರಾಬಾದ್ ಮೂಲದವರು ಎನ್ನಲಾದ ಕುಟುಂಬದವರು, ಅಲ್ಲಿಯೇ ಗುರುವಾರದಂದು ಹೊಚ್ಚ ಹೊಸ ಕಾರೊಂದನ್ನು ಖರೀದಿಸಿ, ತಮ್ಮ ಕುಟುಂಬಸ್ಥರೊಂದಿಗೆ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿರುವ ಮುರುಡೇಶ್ವರಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯೆ ಈ ಅಪಘಾತ ಸಂಭವಿಸಿ, ಆಸ್ಪತ್ರೆ ಸೇರುವಂತಾಗಿರುವುದು ದುರ್ವಿಧಿಯೇ ಸರಿ.

ಚಾಲಕನ ನಿಯಂತ್ರಣ ತಪ್ಪಿದ ಕಾರು, ಹೆದ್ದಾರಿ ಡಿವೈಡರ್ ಬಳಿ ಅಳವಡಿಸಿದ ಕಂಬಕ್ಕೆ ಜೋರಾಗಿ ಡಿಕ್ಕಿ ಪಡಿಸಿಕೊಂಡ ಪರಿಣಾಮ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತದ ರಭಸಕ್ಕೆ ಡಿವೈಡರ್ ದಾಟಿದ ಕಾರು ತಲೆಕೆಳಗಾಗಿ ಪಲ್ಟಿ ಹೊಡೆದು, ಮುಂಭಾಗ ಹಾಗೂ ಇತರೆಡೆ ನುಜ್ಜುಗುಜ್ಜಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 8-10 ಜನರಿದ್ದರು ಎನ್ನಲಾದ ಈ ಕಾರು ಅಪಘಾತಗೊಂಡ ಪರಿಣಾಮ ಕಾರಿನಲ್ಲಿದ್ದ ಒಂದಿಬ್ಬರಿಗೆ ತೀವ್ರ ಸ್ವರೂಪದ ನೋವುಗಳಾಗಿದ್ದು, ಇತರರೂ ಗಾಯಾಳುಗಳಾಗಿದ್ದಾರೆ.

ಘಟನಾ ಸ್ಥಳದಿಂದ ಗಾಯಾಳುಗಳನ್ನು 108 ಆ್ಯಂಬುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಿ, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅದೃಷ್ಟವಶಾತ್ ಸೀಟ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಕಾರ ಚಾಲಕ ಯಾವುದೇ ಗಾಯ ನೋವುಗಳಿಲ್ಲದೇ ಸಂಭವನೀಯ ಅಪಾಯದಿಂದ ಪಾರಾಗಿದ್ದಾನೆ.ಪಿಎಸೈ ಉದ್ದಪ್ಪ ಧರೆಪ್ಪನವರ, ಎಎಸೈ ನಿತ್ಯಾನಂದ ಕಿಂದಳಕರ ಮತ್ತು 112 ತುರ್ತು ಸಿಬ್ಬಂದಿ, ಸ್ಥಳ ಪರಿಶೀಲಿಸಿ, ಕಾನೂನು ಕ್ರಮ ಮುಂದುವರಿಸಿದ್ದಾರೆ.

ಎಚ್ಎಐ ಸಿಬ್ಬಂದಿ ಕ್ರೇನ್ ಬಳಸಿ, ಅಪಘಾತಗೊಂಡ ವಾಹನವನ್ನು ಹೆದ್ದಾರಿ ಪಕ್ಕಕ್ಕೆ ಸರಿಸಿಟ್ಟು, ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಯಾಣದ ವೇಳೆ ಹೃದಯಾಘಾತಬಸ್ಸಿನಲ್ಲೇ ಪ್ರಯಾಣಿಕ ಸಾವು

ಹೊನ್ನಾವರ: ಪ್ರಯಾಣಿಕರೊಬ್ಬರು ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ಹಡಿನಬಾಳ ಕಳಲೆಕೇರಿಯ ಕೃಷ್ಣ ಶೆಟ್ಟಿ (70) ಮೃತಪಟ್ಟ ಪ್ರಯಾಣಿಕ. ವೃತ್ತಿಯಲ್ಲಿ ಅವಲಕ್ಕಿ ಮಿಲ್ ಮಾಲೀಕರಾಗಿದ್ದರು. ಹೊನ್ನಾವರ ಸಂತೆ ಮಾರುಕಟ್ಟೆಗೆ ಹೋಗಿ ಮರಳಿ ಹಡಿನಬಾಳಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹೊನ್ನಾವರದಿಂದ ಗೇರುಸೊಪ್ಪಾಗೆ ಸಾಗುತ್ತಿದ್ದ ಬಸ್ ಕವಲಕ್ಕಿಗೆ ಬಂದಾಗ ಕೃಷ್ಣ ಅವರಿಗೆ ಹೃದಯಾಘಾತ ಉಂಟಾಗಿದೆ. ಸಹಪ್ರಯಾಣಿಕರಿಂದ ವಿಷಯ ಗೊತ್ತಾಗಿ ಚಾಲಕ ಬಸ್ ನಿಲ್ಲಿಸಿದ್ದಾರೆ. ಅಲ್ಲಿಯೇ ಪ್ರಯಾಣಿಕರ ಮನವೊಲಿಸಿ ಬಸ್‌ ಅನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಕೃಷ್ಣ ಶೆಟ್ಟಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Share this article