ಕನ್ನಡಪ್ರಭ ವಾರ್ತೆ ಗುಬ್ಬಿ
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಜೂನ್ 25 ರಂದು ತಾಲುಕು ಬಂದ್ ಮಾಡಲಾಗುತ್ತಿದೆ. ಹೇಮಾವತಿ ಲಿಂಕ್ ಕೆನಾಲ್ ಮೂಲಕ ರಾಮನಗರ ಭಾಗಗಳಿಗೆ ನೀರು ತೆಗೆದುಕೊಂಡು ಹೋಗುವುದನ್ನು ವಿರೋಧಿಸಿ ಇಡೀ ಜಿಲ್ಲೆಯನ್ನೇ ಬಂದ್ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡ ಎಸ್ .ಡಿ. ದಿಲೀಪ್ ಕುಮಾರ್ ತಿಳಿಸಿದರುಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ವಿರೋಧಿಸಿ 25 ರಂದು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜಕೀಯ ಪಕ್ಷಗಳ ಮುಖಂಡರು, ವರ್ತಕರ ಸಂಘ, ದಲಿತಪರ ಸಂಘಟನೆಗಳು ಕನ್ನಡಪರ ಸಂಘಟನೆಗಳು ವಿದ್ಯಾರ್ಥಿಗಳು ಭಾಗವಹಿಸಬೇಕು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕಾಮಗಾರಿಯನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಜೆಡಿಎಸ್ ಮುಖಂಡ ಬಿ .ಎಸ್. ನಾಗರಾಜು ಮಾತನಾಡಿ, ಕ್ಷೇತ್ರದ ಶಾಸಕರು ಬೀದಿಗಳಿದು ರೈತರ ಪರವಾಗಿ ಹೋರಾಟ ಮಾಡಬೇಕು. ತಾಲೂಕಿನ ರೈತರು ಅವರಿಗೆ ಮತವನ್ನು ಹಾಕಿದ್ದಾರೆ. ಅವರ ಹಿತ ಕಾಪಾಡುವುದು ಅವರ ಜೊತೆಗೆ ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲದೆ ಹೋದರೆ ರೈತರು ರಾಜಕೀಯ ಜೀವನವನ್ನೇ ಮುಗಿಸುತ್ತಾರೆ ಎಂಬುದು ನೆನೆಪಿರಲಿ. ಹೇಮಾವತಿ ನೀರು ಜಿಲ್ಲೆಯ ಜನರ ಜೀವನಾಡಿಯಾಗಿದೆ ಎಂದು ಹೇಳಿದರು.ತಾಲೂಕಿಗೆ ಹೇಮಾವತಿ ಹರಿಯುತ್ತಿರುವುದರಿಂದ ಜನರು ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದಾರೆ. ಹೇಮಾವತಿ ನೀರನ್ನು ಬೇರೆಡೆಗೆ ಹರಿಯಲು ಬಿಟ್ಟರೆ ಇಲ್ಲಿನ ರೈತರು ಸಮಸ್ಯೆಗೆ ಸಿಲುಕುತ್ತಾರೆ. ಆದ್ದರಿಂದ ಜೂನ್ 25ರಂದು ನಡೆಯುವ ಗುಬ್ಬಿ ತಾಲೂಕು ಬಂದ್ ನಲ್ಲಿ ರೈತರು ವಿವಿಧ ಸಂಘ ಸಂಸ್ಥೆಗಳ ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಮನವಿ ಮಾಡಿದರು.
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಎಚ್. ಡಿ .ಭೈರಪ್ಪ ಮಾತನಾಡಿ, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿ ಕೆಲಸ ನಿಲ್ಲಿಸವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರುಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತುಮಕೂರು ಜಿಲ್ಲೆಯ ರೈತರನ್ನು ಬಲಿ ಕೊಡುತ್ತಿದ್ದಾರೆ. ಈ ಯೋಜನೆ ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಿದೆ. ಈ ಹೋರಾಟ ಎಲ್ಲಿಗೆ ಮುಗಿಯುವುದಿಲ್ಲ. ಸರ್ಕಾರ ಈ ಯೋಜನೆಯನ್ನು ಹಿಂಪಡೆಯುವವರೆಗೂ ಈ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ, ಜೂನ್ 25ರಂದು ನಡೆಯುವಂತಹ ಬಂದ್‌ಗೆ ಪ್ರತಿಯೊಬ್ಬರೂ ಕೂಡ ಸಹಕಾರ ನೀಡಬೇಕು. ಅಂದಾಗ ಮಾತ್ರ ನಮ್ಮ ನೀರನ್ನು ನಾವು ಉಳಿಸಿಕೊಳ್ಳಬಹುದು. ಹಾಗಾಗಿ ತಾವೆಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.ತಾಲೂಕು ರೈತ ಸಂಘದ ವೆಂಕಟೇಗೌಡ ಮಾತನಾಡಿ, ರೈತರು ದೆಹಲಿಯಲ್ಲಿ ಹೋರಾಟ ಮಾಡಿದಂತೆ ಇಲ್ಲಿಯೂ ಕೂಡ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟವನ್ನು ತೀವ್ರಗೊಳಿಸಬೇಕು. ಬಂದ್‌ನ ಬಿಸಿಯನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಎಂದರು.
ಜೆಡಿಎಸ್ ಮುಖಂಡ ಯೋಗಾನಂದ ಮೂರ್ತಿ ಮಾತನಾಡಿ, ಪ್ರತಿ ಗ್ರಾಮದಿಂದಲೂ ಸಹ ರೈತರು ಸಾರ್ವಜನಿಕರು ವಿದ್ಯಾರ್ಥಿಗಳು ಆಗಮಿಸಿ ಕರೆ ಕೊಟ್ಟಿರುವ ಬಂದ್‌ಗೆ ಸಹಕಾರವನ್ನು ನೀಡಬೇಕು. ಇಲ್ಲದೆ ಹೋದರೆ ನಮ್ಮ ನೀರಿನ ಹಕ್ಕನ್ನು ನಾವೇ ಕಳೆದುಕೊಳ್ಳುತ್ತೇವೆ ಎಂದು ತಿಳಿಸಿದರು.ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದ ಈ ಒಂದು ಪ್ರತಿಭಟನೆ ನಡೆಯಬೇಕಾಗಿದ್ದು ನಾವೆಲ್ಲರೂ ಒಟ್ಟಾಗಿ ಸೇರಿ ಪ್ರತಿಭಟನೆ ಮಾಡೋಣ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಪಪಂ ಅಧ್ಯಕ್ಷ ಜಿ ಎನ್ ಅಣ್ಣಪ್ಪಸ್ವಾಮಿ, ಶಂಕರ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಜಿ. ಆರ್. ಶಿವಕುಮಾರ್,ವರ್ತಕ ಸಂಘದ ಅಧ್ಯಕ್ಷ ದಯಾನಂದ್, ಹಾರನಹಳ್ಳಿ ಪ್ರಭಾಕರ್, ಸುರೇಶ್ ಗೌಡರು, ಎಚ್ ಡಿ ಎಲ್ಲಪ್ಪ, ಅರಳಿ ಮರದ ಹೋಟೆಲ್ ಮಾಲೀಕ ಕಾಂತರಾಜ್, ನಂಜೇಗೌಡ, ಯೋಗಾನಂದ್,ಜಿ ಆರ್ ಪ್ರಕಾಶ್, ಬಲರಾಮಣ್ಣ, ಸೇರಿದಂತೆ ರೈತ ಮುಖಂಡರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.