ಕನ್ನಡಪ್ರಭ ವಾರ್ತೆ ಕನಕಗಿರಿ
ಪಟ್ಟಣದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಮೆರವಣಿಗೆ ಹಾಗೂ ಕರಿ ಹರಿಯುವ ಕಾರ್ಯಕ್ರಮ ಶನಿವಾರ ಮೂಲಾ ನಕ್ಷತ್ರದ ವೇಳೆಯಲ್ಲಿ ನಡೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ಎತ್ತುಗಳ ಮೆರವಣಿಗೆ, ಕರಿ ಹರಿಯುವ ಕಾರ್ಯಕ್ರಮದ ಭಾಗವಾಗಿ ರೈತರು ತಮ್ಮ ಎತ್ತುಗಳಿಗೆ ಬಣ್ಣ ಹಚ್ಚಿ, ನಾನಾ ಬಗೆಯ ಹೂಗಳಿಂದ ಸಿಂಗರಿಸಿದ್ದರು. ಆನೆಗುಂದಿ ಅಗಸಿಯಿಂದ ಮೆಲುಗಡೆ ಅಗಸಿಯವರೆಗೆ ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು.
ಅಗಸಿಗಳಲ್ಲಿನ ಆಂಜನೇಯ ದೇವರಿಗೆ ವಿಶೇಷ ಪೂಜೆಯ ನಂತರ ಹಾಲುಮತ ಸಮುದಾಯದ ರೈತರ ಎತ್ತುಗಳುಕರಿ ಹರಿದವು. ರಾಜಬೀದಿಯ ಮಾರ್ಗವಾಗಿ ಕನಕಾಚಲಪತಿ, ದ್ಯಾಮಮ್ಮದೇವಿ ದೇವಸ್ಥಾನದವರೆಗೆ ಎತ್ತುಗಳ ಮೆರವಣಿಗೆ ನಡೆಯಿತು. ಸುಗ್ಗಿ ಸಂಭ್ರಮದ ಈ ಹಬ್ಬದಲ್ಲಿ ರೈತರು ಹಾಗೂ ಕಾರ್ಮಿಕರು ಪಾಲ್ಗೊಂಡು ಸಂಭ್ರಮಿಸಿದರು.
ಕಾರ ಹುಣ್ಣಿಮೆಯ ಮೂಲಾ ನಕ್ಷತ್ರ ವೇಳೆಯಲ್ಲಿ ಎತ್ತುಗಳ ಮೆರವಣಿಗೆ ನಡೆಸುತ್ತಿದ್ದೇವೆ. ಈ ಬಾರಿ ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿ ಆಗಿದ್ದು, ಬಿತ್ತನೆ ಕಾರ್ಯ ಮುಗಿದಿದೆ. ಉತ್ತಮ ಫಸಲು ಫಸಲು ದೊರಕಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ರೈತ ಜಯರಾಮರೆಡ್ಡಿ ತಿಳಿಸಿದರು.ಕಾರ ಹುಣ್ಣಿಮೆ ನಿಮಿತ್ತ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎತ್ತುಗಳ ಮೆರವಣಿಗೆ ಹಾಗೂ ಕರಿಹರಿಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆ ವೇಳೆ ಯುವಕರು ತಮ್ಮ ಸ್ನೇಹಿತರು ಸೇರಿ ಎತ್ತುಗಳೊಂದಿಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು.ಸತತ ಆರು ವರ್ಷದಿಂದ ಜಯಗಳಿಸುತ್ತಿರುವ ಎತ್ತು:
ಕುಕನೂರು ಪಟ್ಟಣದ ಮಂಜುನಾಥ ತಹಸೀಲ್ದಾರ ಅವರ ಎತ್ತು ಸತತ ಆರು ವರ್ಷದಿಂದ ಕಾರ ಹುಣ್ಣಿಮೆ ದಿನ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಜಯ ತನ್ನದಾಗಿಸಿಕೊಳ್ಳುತ್ತಿದೆ.ಪಟ್ಟಣದ ಕೋಳಿಪೇಟೆಯಲ್ಲಿ ಜರುಗುವ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಹತ್ತಾರು ಎತ್ತುಗಳು ಓಟಕ್ಕೆ ಬರುತ್ತವೆ. ಓಟಕ್ಕೆಂದೆ ಎತ್ತುಗಳನ್ನು ಶೃಂಗರಿಸಿ ಕರೆ ತರುತ್ತಾರೆ. 2018ರಿಂದ 2024ರವರೆಗೆ ಮಂಜುನಾಥ ತಹಸೀಲ್ದಾರ ಅವರ ಎತ್ತು ಮೊದಲ ಸ್ಥಾನ ಪಡೆಯುತ್ತಾ ಬಂದಿದೆ. ಪಟ್ಟಣದ ಕೊಲಿಪೇಟೆಯಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಕರಿ ಎಳೆಯಲಾಯಿತು. ಎತ್ತುಗಳ ಓಟ ಜೋರಿತ್ತು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ನಂತರ ಗೆದ್ದ ಮಂಜುನಾಥ ತಹಸೀಲ್ದಾರ ಅವರ ಎತ್ತನ್ನು ಮೆರವಣಿಗೆ ಮಾಡಲಾಯಿತು.