ಅಧಿಕಾರಿಗಳಿಗೆ ಆದೇಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ವಿದ್ಯಾರ್ಥಿನಿಲಯ , ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಒದಗಿಸಿರುವ ಮೂಲಸೌಲಭ್ಯಗಳನ್ನು ಪರಿಶೀಲಿಸುವಂತೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ, ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಕಡ್ಡಾಯವಾಗಿ ವಿಸಿಟರ್ ಪುಸ್ತಕಗಳನ್ನು ಇಡಬೇಕು. ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳ ಪರಿಶೀಲನೆ ಸಂಬಂಧಪಟ್ಟ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ ಕರ್ತವ್ಯ ಮಾತ್ರವಲ್ಲ. ಎಲ್ಲಾ ಜಿಲ್ಲಾಮಟ್ಟದ ಇಲಾಖಾ ಅಧಿಕಾರಿಗಳು ಆಗಾಗ್ಗೆ ವಸತಿ ಶಾಲೆಗಳು, ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ವಿಸಿಟರ್ ಪುಸ್ತಕದಲ್ಲಿ ನಮೂದಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿದೆ. ಮುಂದೆಯೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಬಿಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ. ಕಾಂಟ್ರಾಕ್ಟರ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್‌ಕುಮಾರ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಎಡಿಸಿ ಗೀತಾ ಹುಡೇದ, ಜಿಪಂ ಉಪಕಾರ್ಯದರ್ಶಿ ಪಿ. ಲಕ್ಷ್ಮೀ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.