ಹೊಸಕೋಟೆ: ಸರ್ಕಾರಿ ನೌಕರರು ವೃತ್ತಿ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹೊಂದಿದ್ದರೆ ಅವರ ವೃತ್ತಿ ಜೀವನ ಸಾರ್ಥಕತೆ ಕಾಣುತ್ತದೆ. ಅಂತಹ ವ್ಯಕ್ತಿತ್ವವನ್ನು ತಹಸೀಲ್ದಾರ್ ವಿಜಯ್ ಕುಮಾರ್ ಅವರು ಹೊಂದಿದ್ದರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಎಚ್‌ಜೆಎಸ್‌ಎಸ್ ಸಭಾ ಭವನದಲ್ಲಿ ನಡೆದ ತಹಸೀಲ್ದಾರ್ ವಿಜಯ್ ಕುಮಾರ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಎಂದರೆ ಕೇವಲ ಖಾತೆ, ಪಹಣಿ ಅಲ್ಲ. ಬದಲಾಗಿ ಕಂದಾಯ ಇಲಾಖೆಯಲ್ಲಿ ಬರುವ ಎಲ್ಲಾ ಕಾರ್ಯಗಳನ್ನು ಸುಗಮವಾಗಿ ಮಾಡುವ ಮೂಲಕ ಒಂದು ವರ್ಷದಲ್ಲಿ 125 ಸಾಗುವಳಿ ಚೀಟಿ ಅಂದರೆ ಸುಮಾರು 400 ಕುಟುಂಬಗಳಿಗೆ ವಿತರಣೆ ಮಾಡಿದ್ದು ವಿಶೇಷ. ಪ್ರಮುಖವಾಗಿ ೧೫೦ ಕುಟುಂಬಗಳಿಗೆ ೯೪ ಸಿಸಿ ಹಕ್ಕುಪತ್ರ ವಿತರಣೆ ಮಾಡಿದ ಶ್ರೇಯಸ್ಸು ತಹಸೀಲ್ದಾರ್ ವಿಜಯ್ ಕುಮಾರ್ ಅವರಿಗೆ ಸಲ್ಲಬೇಕು. 1989ರಲ್ಲಿ ಬಿ.ಎನ್.ಬಚ್ಚೇಗೌಡರು ಶಾಸಕರಾಗಿದ್ದ ಸಂದರ್ಭದಲ್ಲಿ ವಿಜಯ್ ಕುಮಾರ್ ಅವರು ನಂದಗುಡಿ ಹೋಬಳಿಯ ನೆಲವಾಗಿಲಿನಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿ ಹೊಸಕೋಟೆಯಲ್ಲೇ ತಹಸೀಲ್ದಾರ್ ಆಗಿ ಕೆಲಸ ಮಾಡಿ ನಿವೃತ್ತಿ ಆಗುತ್ತಿರುವುದು ವಿಶೇಷ ಎಂದು ಹೇಳಿದರು.ಜಿಲ್ಲಾಧಿಕಾರಿ ಎನ್.ಶಿವಶಂಕರ್ ಮಾತನಾಡಿ, ದೇವರ ಅಥವಾ ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ನಮಗೆ ಜನರ ಸೇವೆ ಮಾಡುವ ಅವಕಾಶ ದಕ್ಕಿದೆ. ಆ ಕೆಲಸವನ್ನು ಹಲವಾರು ರೀತಿಯಲ್ಲಿ ವಿಜಯ್ ಕುಮಾರ್ ಅವರು ೩೫ ವರ್ಷಗಳ ಕಾಲ ಮಾಡಿದ್ದಾರೆ. ಅವರು ಸುಮಾರು 15 ವರ್ಷಗಳಿಂದ ನನಗೆ ಪರಿಚಿತರಾಗಿದ್ದು ನಿಷ್ಠೆ, ಶಿಸ್ತು, ಸಂಯಮ ಹಾಗೂ ಪಾರದರ್ಶಕ ಆಡಳಿತ ನಿರ್ವಹಣೆಗೆ ಸಾಕ್ಷಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿ ಸಹ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಆದ್ದರಿಂದ ಅವರ ನಿವೃತ್ತಿ ಜೀವನ ಸಹ ಸುಖಕರವಾಗಿರಲಿ ಎಂದು ಆಶಿಸಿದರು.
ಇಒ ನಾರಾಯಣಸ್ವಾಮಿ, ಬಿಇಒ ಪದ್ಮನಾಭ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ. ಸತೀಶ್ ಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸದ್ರ ಬಾಬುರೆಡ್ಡಿ, ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಬಿ.ವಿ.ರಾಜಶೇಖರ್‌ಗೌಡ, ಕೋಡಿಹಳ್ಳಿ ಸುರೇಶ್, ಉದ್ಯಮಿಗಳಾದ ಬಿ.ವಿ.ಬೈರೇಗೌಡ, ಬೋಧನಹೊಸಹಳ್ಳಿ ಪ್ರಕಾಶ್, ಮುಖಂಡರಾದ ಬಿ.ಎನ್.ಗೋಪಾಲಗೌಡ, ತಮ್ಮೆಗೌಡ, ಮುತ್ಕುರು ಮುನಿರಾಜು, ನೆಲವಾಗಿಲು ಭೀರಪ್ಪ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಬಾಕ್ಸ್................
ಭಾವುಕರಾದ ತಹಸೀಲ್ದಾರ್ನಿವೃತ್ತಿಯಾದ ತಹಸೀಲ್ದಾರ್ ವಿಜಯ್ ಕುಮಾರ್ ಅವರು ಭಾಷಣದ ವೇಳೆ ವೇದಿಕೆ ಮೇಲೆ ಭಾವುಕರಾದರು. ನನ್ನ ತಂದೆಯ ಆದರ್ಶಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಎಲ್ಲರನ್ನು ಒಪ್ಪಿಸಿ ಕೆಲಸ ಮಾಡಲು ಆಗುವುದಿಲ್ಲ. ಅದರ ನಡುವೆಯೂ ಪ್ರಾಮಾಣಿಕ ಜನಸೇವೆ ಮಾಡಿದ್ದು ಸಹೋದ್ಯೋಗಿಗಳ, ಜನಪ್ರತಿನಿಧಿಗಳ ಸಹಕಾರದಿಂದ ಸಾಧ್ಯವಾಯಿತು ಎಂದು ಸ್ಮರಿಸಿದರು.
ಫೋಟೋ: 31 ಹೆಚ್ ಎಸ್ ಕೆ 1ಹೊಸಕೋಟೆ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಎಂ.ವಿಜಯ್ ಕುಮಾರ್ ಅವರನ್ನು ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿ ಎನ್. ಶಿವಶಂಕರ್ ಸೇರಿ ಹಲವು ಗಣ್ಯರು ಗೌರವಿಸಿದರು.