ಬ್ಯಾಂಟರ್ ಬಾಬು- ವ್ಯಂಗ್ಯಚಿತ್ರಗಳ ಸಿಂಹಾವಲೋಕನ

KannadaprabhaNewsNetwork |  
Published : Feb 22, 2024, 01:47 AM IST
30 | Kannada Prabha

ಸಾರಾಂಶ

ಡಾ. ಶಂಕರದಯಾಳ್ ಶರ್ಮ, ಕೆ.ಆರ್. ನಾರಾಯಣನ್, ಪಿ.ವಿ. ನರಸಿಂಹರಾವ್, ದಲೈಲಾಮ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ನರೇಂದ್ರ ಮೋದಿ, ಕಪಿಲ್ ದೇವ್, ಶೋಭಾ ಡೇ, ಎಸ್. ಜಾನಕಿ, ಜೇಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮುಲ್ಕ್ ರಾಜ್ ಆನಂದ್, ಡಾ.ಸುಬ್ರಮಣಿಯನ್ ಸ್ವಾಮಿ, ಡೆಸ್ಮಂಡ್ ಟುಟು, ಪಿ.ಟಿ ಉಷಾ, ಬಿಸ್ಮಿಲ್ಲಾ ಖಾನ್, ಉಸ್ತುದಾ ಜಾಕೀರ್ ಹುಸೇನ್, ಇರ್ಫಾನ್ ಖಾನ್, ಡಾ.ರಾಜಕುಮಾರ್, ಡಾ.ಮಹಮದ್ ಯೂನಸ್, ಕಿರಣ್ ಬೇಡಿ, ಕದ್ರಿ ಗೋಪಾಲನಾಥ್. ಜಾರ್ಜ್ ಫರ್ನಾಂಡಿಸ್. ರಾಮಕೃಷ್ಣ ಹೆಗಡೆ ಮುಂತಾದವರ ವ್ಯಂಗ್ಯಚಿತ್ರಗಳನ್ನು ರಚಿಸಿ, ಅವರನ್ನು ಭೇಟಿಯಾಗಿ ಹಸ್ತಾಕ್ಷರ ಪಡೆದಿದ್ದಾರೆ. 1994 ರಲ್ಲಿ ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ 276 ಅಡಿ ಉದ್ದದ ಗ್ರೀಟಿಂಗ್ ಕಾರ್ಡ್ ರೂಪಿಸಿ, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ತಮ್ಮ ಮೊನಚಾದ ವ್ಯಂಗ್ಯಚಿತ್ರಗಳ ಅಂಕಣದ ಮೂಲಕ ಬ್ಯಾಂಟರ್ ಬಾಬು ಎಂದೇ ಹೆಸರಾಗಿರುವ ಎಂ.ವಿ. ನಾಗೇಂದ್ರಬಾಬು ಅವರು ವ್ಯಂಗ್ಯಚಿತ್ರಗಳ ಸಿಂಹಾವಲೋಕನ ಕೃತಿಯನ್ನು ಪ್ರಕಟಿಸಿದ್ದಾರೆ.

ಮೈಸೂರಿನ ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆಗಳ ವ್ಯಂಗ್ಯಚಿತ್ರಕಾರರಾದ ಇವರು, ಇತರೆ ದೈನಿಕಗಳು ಹಾಗೂ ನಿಯತಕಾಲಿಕೆಗಳಲ್ಲೂ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದಾರೆ. ಈವರೆಗೆ ಸುಮಾರು 19 ಸಾವಿರ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ.

ಡಾ. ಶಂಕರದಯಾಳ್ ಶರ್ಮ, ಕೆ.ಆರ್. ನಾರಾಯಣನ್, ಪಿ.ವಿ. ನರಸಿಂಹರಾವ್, ದಲೈಲಾಮ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ನರೇಂದ್ರ ಮೋದಿ, ಕಪಿಲ್ ದೇವ್, ಶೋಭಾ ಡೇ, ಎಸ್. ಜಾನಕಿ, ಜೇಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮುಲ್ಕ್ ರಾಜ್ ಆನಂದ್, ಡಾ.ಸುಬ್ರಮಣಿಯನ್ ಸ್ವಾಮಿ, ಡೆಸ್ಮಂಡ್ ಟುಟು, ಪಿ.ಟಿ ಉಷಾ, ಬಿಸ್ಮಿಲ್ಲಾ ಖಾನ್, ಉಸ್ತುದಾ ಜಾಕೀರ್ ಹುಸೇನ್, ಇರ್ಫಾನ್ ಖಾನ್, ಡಾ.ರಾಜಕುಮಾರ್, ಡಾ.ಮಹಮದ್ ಯೂನಸ್, ಕಿರಣ್ ಬೇಡಿ, ಕದ್ರಿ ಗೋಪಾಲನಾಥ್. ಜಾರ್ಜ್ ಫರ್ನಾಂಡಿಸ್. ರಾಮಕೃಷ್ಣ ಹೆಗಡೆ ಮುಂತಾದವರ ವ್ಯಂಗ್ಯಚಿತ್ರಗಳನ್ನು ರಚಿಸಿ, ಅವರನ್ನು ಭೇಟಿಯಾಗಿ ಹಸ್ತಾಕ್ಷರ ಪಡೆದಿದ್ದಾರೆ. 1994 ರಲ್ಲಿ ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ 276 ಅಡಿ ಉದ್ದದ ಗ್ರೀಟಿಂಗ್ ಕಾರ್ಡ್ ರೂಪಿಸಿ, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಮೈಸೂರು ಮಾತ್ರವಲ್ಲದೇ ಲಂಡನ್, ಮಲೇಷಿಯಾ, ಅಮೆರಿಕಾ, ಥೈವಾನ್, ಸಿಂಗಾಪುರ ಮೊದಲಾದ ಕಡೆ ಕೂಡ ವ್ಯಂಗ್ಯಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರು. ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧೆಡೆ ವ್ಯಂಗ್ಯಚಿತ್ರಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಅಮೆರಿಕಾದ ಫುಲ್ ಬ್ರೈಟ್ ಫೆಲೋಶಿಪ್ ಕೂಡ ಪಡೆದಿದ್ದಾರೆ.

ಆಸಕ್ತಿ ಮೂಡಿದ್ದು ಹೇಗೆ?

ಜೆಎಸ್ಎಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುವಾಗ ಗ್ರಂಥಾಲಯಕ್ಕೆ ಭೇಟಿ ನೀಡಿ, ಪತ್ರಿಕೆಗಳು, ನಿಯತಕಾಲಿಕೆಗಳನ್ನು ಗಮನಿಸುತ್ತಿದ್ದರು. ಸಂಪಾದಕೀಯ ಪುಟದಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯಚಿತ್ರಗಳು ಇವರ ಗಮನ ಸೆಳೆದವು. ಇದರಿಂದ ಚಿತ್ರಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು, ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆ ಪಾಸು ಮಾಡಿದರು. 1990 ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಸರ್ಕಾರ ಪತನವಾಗಿ ಚಂದ್ರಶೇಖರ್ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಸರ್ಕಾರ ರಚನೆಯಾಗಿತ್ತು. ಇದನ್ನು ಗಮನಿಸಿದ ನಾಗೇಂದ್ರ ಬಾಬು ಕೈಯಲ್ಲಿ ಸುದರ್ಶನ ಚಕ್ರ ಹಿಡಿದು ತಿರುಗಿಸುತ್ತಿರುವ ರೀತಿಯ ವ್ಯಂಗ್ಯ ಚಿತ್ರ ಬರೆದು ಕಳುಹಿಸಿದರು. ಅದು ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದ ಇವರು ವ್ಯಂಗ್ಯಚಿತ್ರ ಯಾತ್ರೆ ಆರಂಭವಾಯಿತು.

1990 ರಿಂದ ಈವರೆಗೆ ರಚಿಸಿರುವ ವ್ಯಂಗ್ಯಚಿತ್ರಗಳನ್ನು ಆಯ್ದು ವ್ಯಂಗ್ಯಚಿತ್ರಗಳ ಸಿಂಹಾವಲೋಕನ ಕೃತಿಯನ್ನು ಪ್ರಕಟಿಸಿದ್ದಾರೆ. ಇಲ್ಲಿರುವ ಬಹುತೇಕ ವ್ಯಂಗ್ಯಚಿತ್ರಗಳು ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸುತ್ತವೆ. ಮನಸ್ಸಿಗೆ ರಂಜನೆ, ಕಚಗುಳಿ ಜೊತೆಗೆ ಮುದ ನೀಡುತ್ತವೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ವಿವರಣೆ ಇದೆ.

ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರುವ ಬಾಬು, ನಾನು ವ್ಯಂಗ್ಯಚಿತ್ರಕಾರನಾಗಿರದಿದ್ದಲ್ಲಿ ಲೈನ್ ಮನ್ ಅಥವಾ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆಗಿರುತ್ದಿದ್ದೆ ಎನ್ನುತ್ತಾರೆ.

ಈ ಕೃತಿಯನ್ನು ಎವಿವಿ ಕಂಪ್ಯೂಗ್ರಾಫಿಕ್ಸ್ ಪ್ರಕಟಿಸಿದ್ದು, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅವರ ಮುನ್ನುಡಿ, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್. ಅನಂತರ, ನಿರ್ಮಾಣ ಯೋಗ ಶಾಲೆಯ ಟಿ.ಎನ್. ಶಶಿಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರ ಆಶಯ ನುಡಿ, ಐಐಎಸ್ಸಿಯ ವಿಜ್ಞಾನಿ ಪ್ರವೀಣ್ ಸಿ. ರಾಮಮೂರ್ತಿ ಅವರ ಬೆನ್ನುಡಿ ಇದೆ. ಆಸಕ್ತರು ಮೊ. 99809 45259 ಸಂಪರ್ಕಿಸಬಹುದು.

24 ರಂದು ಬಿಡುಗಡೆ

ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ. 24 ರಂದು ಸಂಜೆ 5.30ಕ್ಕೆ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ವ್ಯಂಗ್ಯಚಿತ್ರ ಸಿಂಹಾವಲೋಕನ ಕೃತಿಯನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡುವರು. ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಕಾರ್ಯಕ್ರಮ ಉದ್ಘಾಟಿಸುವರು. ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಕೃತಿ ಕುರಿತು ಮಾತನಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು.

ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷ ವಿಆರ್ ಸಿ ಶೇಖರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್, ಕಾಳಿದಾಸ ರಸ್ತೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸಿಇಒ ಕೆ.ಆರ್. ಯೋಗಾನರಸಿಂಹನ್, ಯೋಗ ವಿತ್ ಶ್ರೀನಾಥ ಸಂಸ್ಥಾಪಕ ಶ್ರೀನಾಥ್ ಮುಖ್ಯ ಅತಿಥಿಗಳಾಗಿರುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!