ಲಕ್ಷ್ಮೇಶ್ವರ: ಸರ್ವಜ್ಞರ ವ್ಯಕ್ತಿತ್ವ ನಿತ್ಯ ಅನಿಕೇತನವಾದುದು. ಒಂದೇ ಕಡೆಗೆ ನಿಲ್ಲದೆ ಗಾಳಿಯ ಅಲೆಯಂತೆ ಜಗವ ಸುತ್ತಿದವನು. ತುಂಡುಗಂಬಳಿ ಹೊದ್ದು ಹಿಂಡನಗಲಿದ ಗಜದಂತೆ ಜಗ ಸುತ್ತಿ ಜಗದ ಜನರ ಜೀವನವನ್ನು ಅರಿತವನು ಎಂದು ಅಗಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿ.ಎಸ್. ಹಿರೇಮಠ ಅಭಿಪ್ರಾಯಪಟ್ಟರು. ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಸದ ಮಾತು ಕಾರ್ಯಕ್ರಮ ಸರಣಿಯ ೧೦ನೇ ಸಂಚಿಕೆಯಲ್ಲಿ ಸರ್ವಜ್ಞ ಜಯಂತಿಯ ಅಂಗವಾಗಿ ಪಟ್ಟಣದ ಬಸ್ತಿಬಣದ ಮಹಾರಾಜ ಮಂದಿರದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವಜ್ಞನ ತ್ರಿಪದಿಗಳು ನಮ್ಮ ನಾಡಿನ ಸಂಪತ್ತಾಗಿದೆ. ಕನ್ನಡ ಸಾಹಿತ್ಯಕ್ಕೆ ತ್ರಿಪದಿಗಳು ನೀಡಿದ ಕೊಡುಗೆ ಅಮೂಲ್ಯವಾಗಿದೆ. ಜಗದ ಎಲ್ಲ ಓರೆ ಕೋರೆ, ನೋವು ನಲಿವು, ಪ್ರೀತಿ, ಪ್ರೇಮ, ಮತ್ಸರ ಹೀಗೆ ಮನುಜನ ಎಲ್ಲ ಅರಿಷಡ್ವರ್ಗಗಳನ್ನು ತಮ್ಮ ತ್ರಿಪದಿಯಲ್ಲಿ ತುಂಬಿಕೊಡುವ ಮೂಲಕ ಅವುಗಳಿಗೆ ಉತ್ತರವನ್ನು ನೀಡುವ ಕಾರ್ಯವನ್ನು ಸರ್ವಜ್ಞನು ಮಾಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಅವರು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ, ಮೂರು ಸಾಲುಗಳ ಹೊಟ್ಟೆಯಲ್ಲಿ ಮೂಜಗ ತೋರಿದ ದಿಟ್ಟ ಸರ್ವಜ್ಞನು. ನೇರ, ದಿಟ್ಟ, ಪ್ರಾಮಾಣಿಕತೆ, ವೈಚಾರಿಕತೆಗಳನ್ನುಅವರ ತ್ರಿಪದಿಗಳಲ್ಲಿ ಕಾಣುತ್ತೇವೆ. ಅವರ ತ್ರಿಪದಿಗಳು ಮಾನವ ಕುಲದ ಸಂಪತ್ತು. ಅವು ನಿಜಕ್ಕೂ ಅಗಾಧತೆಯ ನಿಜ ಸಾಗರ ಎಂದರು.
ಕಾರ‍್ಯಕ್ರಮದಲ್ಲಿ ಸರ್ವಜ್ಞರ ಚಿಂತನ ಹಂಚಿಕೊಂಡ ಟೀಮ್ ಚಿರನೂತನದ ಷಣ್ಮುಖ ಗಡ್ಡೆಣ್ಣನವರ, ಸರ್ವಜ್ಞ ಎಂದರೆ ‘ನಾನು ಎಲ್ಲ ತಿಳಿದವನು’ ಎಂಬ ಗರ್ವವಲ್ಲ. ಸರ್ವರೊಳಗೊಂದು ಒಂದೊಂದು ನುಡಿ ಕಲಿತವನು’ ಎಂಬ ಅರ್ಥವು ಕಲಿಕೆಗಿರುವ ಸಾಮಾಜಿಕ, ಜಾನಪದೀಯ ಆಯಾಮವನ್ನು ಎತ್ತಿ ತೋರಿಸುತ್ತದೆ. ವಿದ್ಯೆಯ ಅರ್ಥವಾಗುವುದು, ನಾವೇನೋ ಅಪಾರವಾದದ್ದನ್ನು ಕಲಿತು ಜ್ಞಾನ ಸಿದ್ಧಿಸಿಕೊಳ್ಳುವುದರಲ್ಲಿಲ್ಲ. ಎಲ್ಲರೊಳು ಒಂದಾಗಿ, ಎಲ್ಲರನ್ನು ಗುರುವಾಗಿ ಕಂಡು, ಎಲ್ಲರಲ್ಲೂ ಇರುವ ‘ವಿದ್ಯೆ’ಯನ್ನು ಗ್ರಹಿಸಿ, ಸಂಗ್ರಹಿಸಿ ತಮ್ಮದಾಗಿಸಿಕೊಳ್ಳುವುದೆ ಆಗಿದೆ ಎಂಬುದು ತ್ರಿಕಾಲ ಜ್ಞಾನಿ ಸರ್ವಜ್ಞನ ವಿಚಾರವಾಗಿತ್ತು ಎಂದರು.ಹಿರಿಯ ಸಮಾಜ ಚಿಂತಕ ಮಹಾದೇವಪ್ಪ ಕುಂಬಾರ ಕಾರ‍್ಯಕ್ರಮ ಉದ್ಘಾಟಿಸಿದರು. ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ದಿಗಂಬರ ಪೂಜಾರ ಹಾಗೂ ಮಾಳಿಂಗರಾಯ ಪೂಜಾರ ಅವರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಚಂದ್ರಶೇಖರ ವಡಕಣ್ಣವರ ಸರ್ವಜ್ಞನ ತ್ರಿಪದಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಸಾಂಸ್ಕೃತಿಕ ಚಿಂತಕ ಬಸವರಾಜ ಹುಲಮನಿ, ಯಲ್ಲಪ್ಪ ಚಕ್ರಸಾಲಿ ಮಾತನಾಡಿದರು. ಸಮಾಜ ಚಿಂತಕ ದೇವಪ್ಪ ಕುಂಬಾರ ಅವರನ್ನು ಗೌರವಿಸಲಾಯಿತು. ಹಿರಿಯ ಸಾಹಿತಿ ಎಸ್.ಎಫ್. ಆದಿ, ಐ.ಎ. ಬಳಿಗಾರ, ವಿ.ಎಂ. ಹೂಗಾರ, ಎನ್.ಸಿ. ಪ್ಯಾಟಿಗೌಡ, ಈಶ್ವರ ಬನ್ನಿಕೊಪ್ಪ, ಪಿ.ಎಚ್. ಕೊಂಡಾಬಿಂಗಿ, ಶಿವಾನಂದ ಚಕ್ರಸಾಲಿ, ಮಲ್ಲಪ್ಪನವರ, ಬಾಬಣ್ಣ ಹಾಲಗುಂಡಿ, ಶಿವಪ್ರಕಾಶ್ ಗುಡಿಗೇರಿ, ಈರಣ್ಣ ರಿತ್ತಿ, ಸಿದ್ದಪ್ಪ ನೀರಲಗಿ, ಸುರೇಶ ಕಾಕಡೆ ಇದ್ದರು.ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು. ಸಲಹಾ ಸಮಿತಿಯ ಸದಸ್ಯ ಈರಣ್ಣ ಗಾಣಿಗೇರ ವಂದಿಸಿದರು. ಎಸ್.ಬಿ. ಅಣ್ಣಿಗೇರಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಅಕ್ಷತಾ ಹಡಪದ ಕಾರ್ಯಕ್ರಮ ನಿರೂಪಿಸಿದರು.