ಪಾದರಾಯನಪುರ ಗಲಭೆಯ 375 ಆರೋಪಿಗಳ ವಿರುದ್ಧದ ಕೇಸ್‌ ರದ್ದು

KannadaprabhaNewsNetwork |  
Published : Mar 20, 2024, 01:17 AM ISTUpdated : Mar 20, 2024, 01:07 PM IST
ಹೈಕೋರ್ಟ್‌ | Kannada Prabha

ಸಾರಾಂಶ

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ನಗರದ ಪಾದರಾಯನಪುರದಲ್ಲಿ ನಡೆದ ಗಲಭೆ ಸಂಬಂಧ ಗುಂಪುಗೂಡಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪ ಸಂಬಂಧ 375 ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ನಗರದ ಪಾದರಾಯನಪುರದಲ್ಲಿ ನಡೆದ ಗಲಭೆ ಸಂಬಂಧ ಗುಂಪುಗೂಡಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪ ಸಂಬಂಧ 375 ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರಿ ನವಾಜ್ ಪಾಷಾ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ ಈ ಆದೇಶ ಮಾಡಿದೆ.

ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರಕ್ಕೆ ಸೀಲ್ ಡೌನ್ ಮಾಡಲು ಹೋದಾಗ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು ಎಂದು ಹೇಳುತ್ತಾರೆ. ಆದರೆ, ಯಾರಿಗೆ ಸೋಂಕು ತಗುಲಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ. 

ಪ್ರಕರಣದಲ್ಲಿ ಒಂದೇ ರೀತಿಯಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಗಲಭೆ ನಡೆದಿದೆ ಎನ್ನಲಾದ ಸಮಯದಲ್ಲಿ ಯಾವುದೇ ಆಸ್ತಿ ಪಾಸ್ತಿ ನಷ್ಟವಾಗಿಲ್ಲ. ಪೊಲೀಸರು ಯಾವುದೇ ವಸ್ತು ವಶಪಡಿಸಿಕೊಂಡಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಲ್ಲದೆ, ಬಿಬಿಎಂಪಿ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಡೌನ್ ಮಾಡಲು ಮುಂದಾದಾಗ ಅಲ್ಲಿನ ಜನರು ಹಾಲು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ತೊಂದರೆ ಆಗಬಹುದೆಂದು ಪ್ರತಿರೋಧ ಮಾಡಿರಬಹುದು. 

ಆಗ ಒಂದು ರೀತಿಯ ಬಿಗುವಿನ ವಾತಾವರಣ ನಿರ್ಮಾಣವಾಗಿರಬಹುದು. ಜತೆಗೆ, ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಐಪಿಸಿ ಸೆಕ್ಷನ್ 188ರಡಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ನಿರ್ಬಂಧವಿದೆ. 

ಆದರೂ ಈ ಸೆಕ್ಷನ್‌ ಅಡಿಯಲ್ಲಿ ಕಾಗ್ನಿಜೆನ್ಸ್ ತೆಗೆದುಕೊಂಡು ಮುಂದುವರಿದಿರುವುದು ಸರಿಯಲ್ಲ. ಹಾಗಾಗಿ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಲಾಗುವುದು ಎಂದು ಆದೇಶಿಸಿದೆ.

2020ರ ಏ.19ರಂದು ಸಂಜೆ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಸೋಂಕು ತಗುಲಿದ್ದ 51 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲು ಪಾದರಾಯನಪುರದಲ್ಲಿ ಹೋಗಿದ್ದರು. 

ಅಲ್ಲಿ ಅರ್ಜಿದಾರ ಆರೋಪಿಗಳು ಅಕ್ರಮವಾಗಿ ಗುಂಪು ಸೇರಿದ್ದರು. ಕೈಯಲ್ಲಿ ಚಾಕು, ದೊಣ್ಣೆ ಮತ್ತು ರಾಡ್‌ಗಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು. 

ಆರೋಪಿಗಳು ಚೇರು, ಟೇಬಲ್‌ಗಳನ್ನು ಒಡೆದು ಟೆಂಟ್ ಕಿತ್ತು ಹಾಕಿ ಅಕ್ಕ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದರು ಎನ್ನಲಾಗಿತ್ತು.

ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರಿದ್ದ ಅರ್ಜಿದಾರರು, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. 

ತಮ್ಮ ಮನೆಗಳು ಬೇರೆ ಕಡೆಯಿವೆ. ನಿಜವಾದ ಆರೋಪಿಗಳನ್ನು ಗುರುತಿಸದೆ ಪೊಲೀಸರು ಸಿಕ್ಕ ಸಿಕ್ಕವರ ಮೇಲೆ ಕೇಸ್ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಾಗ ಅವರಲ್ಲಿ ಸೋಂಕಿತರ ಪಟ್ಟಿಯೇ ಇರಲಿಲ್ಲ. ಗಲಭೆ ನಡೆದಿದೆ ಎಂದು ಹೇಳಿದ್ದರೂ ಯಾರೊಬ್ಬರಿಗೂ ಗಾಯವಾಗಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಿವಿ ಹಂಗಾಮಿ ಎಇ ಹುದ್ದೆ ಅಧಿಸೂಚನೆ ರದ್ದುಪಡಿಸಿ
ಬಸಾಪುರ ಸರ್ಕಾರಿ ಶಾಲೆಗೆ ಕಾಯಕಲ್ಪ ಎಲ್ಲರಿಗೂ ಪ್ರೇರಣೆಯಾಗಲಿ