ಬೆಂಗಳೂರು : ವಿರೋಧ ಪಕ್ಷ ಬಿಜೆಪಿಯ ನಾಯಕರನ್ನು ಬಗ್ಗು ಬಡಿಯಲು ಕಾಂಗ್ರೆಸ್ ಸರ್ಕಾರ, ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರ ತಪ್ಪಿಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಾಲಕ ಬಾಬು ಅವರಿಗೆ ಇಬ್ಬರು ವ್ಯಕ್ತಿಗಳು ಕೆಲಸ ಕೊಡಿಸುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾರೆ. 2021ರಲ್ಲಿ ಅವರಿಂದ ಹಣ ಪಡೆದಿದ್ದಾರೆ. ಡೆತ್‌ನೋಟ್ ಆಧಾರದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಎ1 ಆರೋಪಿ ಮಾಡಲಾಗಿದೆ. ಮುಖ್ಯಮಂತ್ರಿಯಿಂದ ಕೆಲಸ ಆಗುತ್ತದೆ ಎಂದು ಯಾರಾದರೂ ಹಣ ಪಡೆದರೆ ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್ ಮಾಡಲು ಸಾಧ್ಯವಾಗುವುದಿಲ್ಲ. ಸಂಸದ ಡಾ.ಕೆ.ಸುಧಾಕರ್ ಅವರ ಬಳಿಯೇ ನೇರವಾಗಿ ಹೋಗಿ ಹಣ ನೀಡಿದ್ದಾರೆ ಎಂದಿದ್ದರೆ, ಆಗ ನೇರ ಆರೋಪ ಮಾಡಬಹುದಿತ್ತು ಎಂದರು.
ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ವಿರುದ್ಧ, ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯಲ್ಲಿ ಪ್ರಭಾವಿಯಾಗಿರುವವರನ್ನು ಬಗ್ಗುಬಡಿಯಲು ಸರ್ಕಾರ ಈ ರೀತಿ ಮಾಡುತ್ತಿದೆ. ಅಷ್ಟು ಛಲವಿದ್ದರೆ ಚುನಾವಣೆಯಲ್ಲಿ ಸೋಲಿಸಿ ಜಯ ಸಾಧಿಸಬಹುದಿತ್ತು. ಅದನ್ನು ಬಿಟ್ಟು ಈಗ ಕಾಂಗ್ರೆಸ್ ದ್ವೇಷ ಸಾಧಿಸುತ್ತಿದೆ. ಬಿಜೆಪಿಯ ಎಲ್ಲ ನಾಯಕರು, ಶಾಸಕರು ಈ ಘಟನೆ ಖಂಡಿಸುತ್ತಾರೆ. ಹಣ ಪಡೆದವರನ್ನು ಬಂಧಿಸಿ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ. ಸುಮ್ಮನೆ ಶಾಸಕರ, ಸಂಸದರ ಹೆಸರು ಹೇಳಿದರೆ ಅದಕ್ಕೆ ಅವರೇ ಕಾರಣರಾಗುವುದಿಲ್ಲ ಎಂದರು.
ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರ ಪಾತ್ರವಿಲ್ಲ. ರಾಜಕೀಯವಾಗಿ ಅವರನ್ನು ಬಗ್ಗುಬಡಿಯಲು ಸರ್ಕಾರ ಹೀಗೆ ಮಾಡಿದೆ. ಅವರಿಗೆ ಕಿರುಕುಳ ನೀಡಿದರೆ ನಾವೆಲ್ಲರೂ ಸೇರಿ ತೀವ್ರ ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ಅವರನ್ನು ಮೃತ ಚಾಲಕ ಬಾಬು ಭೇಟಿ ಮಾಡಿಲ್ಲ. ಆದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಪ್ರಕರಣದಲ್ಲಿ ಸಂಚು ಹೂಡಿ ಎಫ್‌ಐಆರ್ ದಾಖಲಿಸುವಂತೆ ಮಾಡಿದ್ದಾರೆ. ನನ್ನ ಮೇಲೂ ಇತ್ತೀಚೆಗೆ ಪ್ರಕರಣ ದಾಖಲಿಸಿದ್ದರು. ಆದರೆ ನಾನು ಭಯಪಡಲಿಲ್ಲ. ಯಾವುದೇ ಎಫ್‌ಐಆರ್ ದಾಖಲಿಸುವ ಮುನ್ನ ಸರಿಯಾದ ಸಾಕ್ಷಿಗಳು ಇರಬೇಕು. ಕಾಂಗ್ರೆಸ್ ಶಾಸಕರು, ಸಚಿವರ ವಿರುದ್ಧ ಸಾಕ್ಷಿಗಳಿದ್ದರೂ ದೂರು ದಾಖಲಿಸುವುದಿಲ್ಲ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಉಪಸ್ಥಿತರಿದ್ದರು.
ಸಚಿವ ಡಾ.ಸುಧಾಕರ್, ಇತರರ
ಚಿತಾವಣೆಯಿಂದ ಕೇಸ್: ಆರೋಪ
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಚಾಲಕ ಬಾಬು ಡೆತ್‌ನೋಟ್‌ನಲ್ಲಿ ಸಂಸದ ಡಾ.ಕೆ.ಸುಧಾಕರ್ ಬಗ್ಗೆ ಆರೋಪ ಮಾಡಿಲ್ಲ. ಆರೋಪವೇ ಇಲ್ಲವೆಂದ ಮೇಲೆ ಎ1 ಆರೋಪಿ ಮಾಡಲು ಸಾಧ್ಯ? ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದಾರೆ ಎಂದು ನೆಲಮಂಗಲ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಂಗನಾಥ್ ಬಾಬು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಾಗ, ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ಹೆಸರು ಬರೆದಿದ್ದರು. ಆದರೆ ಆ ಇಬ್ಬರು ಶಾಸಕರು ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಿಲ್ಲ ಎಂದು ತಿಳಿಸಿದ್ದಾರೆ.
ಮೃತ ಚಾಲಕ ಬಾಬು ನೇರವಾಗಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡದಿದ್ದರೂ ಅವರನ್ನು ಎ1 ಆರೋಪಿ ಮಾಡಲಾಗಿದೆ. ಕೊಡಗಿನಲ್ಲಿ ನಡೆದ ಘಟನೆಯಲ್ಲಿ ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆದರೆ ಇಲ್ಲಿ ಸಂಸದರ ತೇಜೋವಧೆ ಮಾಡಲು ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಂಡಿದೆ. ಸರ್ಕಾರಕ್ಕೆ ಗುಂಡಿ ಮುಚ್ಚಲು ಹಣವಿಲ್ಲ. ಅಭಿವೃದ್ಧಿ ಕಡೆ ಗಮನಹರಿಸುವುದನ್ನು ಬಿಟ್ಟು ಇಂಥ ಕ್ಷುಲ್ಲಕ ರಾಜಕೀಯದಲ್ಲಿ ಸರ್ಕಾರ ತೊಡಗಿಕೊಂಡಿದೆ ಎಂದು ದೂರಿದರು.