ಕಾರಿನಿಂದ ಡಿಕ್ಕಿ ಹೊಡೆದು 100 ಮೀ. ಎಳೆದೊಯ್ದ ಕೇಸ್‌: ಮೂವರ ಬಂಧನ

KannadaprabhaNewsNetwork |  
Published : Oct 27, 2026, 04:00 AM IST
Ajay | Kannada Prabha

ಸಾರಾಂಶ

ಇತ್ತೀಚೆಗೆ ರಸ್ತೆ ಗಲಾಟೆಯಾಗಿ ಯುವಕನ ಮೇಲೆ ಕಾರು ಹತ್ತಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭವಾರ್ತೆ ಬೆಂಗಳೂರು ಇತ್ತೀಚೆಗೆ ರಸ್ತೆ ಗಲಾಟೆಯಾಗಿ ಯುವಕನ ಮೇಲೆ ಕಾರು ಹತ್ತಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ರಂಜಿತ್ ಕುಮಾರ್ ಸಾಹು (25) ಎಂಬುವನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಅಜಯ್‌, ಸಾಜಲ್‌ ಮತ್ತು ಬಿಜೋನ್‌ ರಾಯ್‌ ಎಂಬುವರನ್ನು ಬಂಧಿಸಲಾಗಿದೆ. ಓರ್ವ ನಾಪತ್ತೆಯಾಗಿದ್ದಾನೆ. ಮೃತನ ಸ್ನೇಹಿತ ನಿತೀಶ್‌ ಮುಖಿಯಾ ಎಂಬುವರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಬಿಟಿಎಂ ಲೇಔಟ್‌ನ ಪಿ.ಜಿ.ಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ರಂಜಿತ್‌ನನ್ನು ಅ.21ರ ರಾತ್ರಿ ಕಾರಿನಿಂದ ಡಿಕ್ಕಿ ಹೊಡೆದು ಸುಮಾರು 100 ಮೀಟರ್‌ ದೂರ ಎಳೆದೊಯ್ದು ರಸ್ತೆ ಮಧ್ಯೆ ಬಿಟ್ಟು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರಂಜಿತ್‌ ಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು.

ಪ್ರಕರಣ ವಿವರ:ದೂರುದಾರರಾದ ಬಿಹಾರ ಮೂಲದ ನಿತೀಶ್‌ ಮುಖಿಯಾ ದಸರಾ ಹಬ್ಬಕ್ಕೆಂದು ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಪ್ರಗತಿನಗರದಲ್ಲಿ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಅ.21 ರ ರಾತ್ರಿ ಊಟದ ಬಳಿಕ ಅಣ್ಣನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಅತಿವೇಗವಾಗಿ ಬಂದಿದೆ. ಕಾರಿನ ವೇಗ ಕಡಿಮೆ ಮಾಡುವಂತೆ ಚಾಲಕನಿಗೆ ನಿತೀಶ್‌ ಸನ್ನೆ ಮಾಡಿದ್ದರು. ಇದರಿಂದ ಕಾರಿನಲ್ಲಿದ್ದವರು ಆಕ್ರೋಶಗೊಂಡು, ನಮ್ಮ ಕಾರಿಗೆ ಕೈ ತೋರಿಸುತ್ತೀಯಾ ಎಂದು ನಿತೀಶ್‌ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ತೆರಳಿದ್ದರು.

ಅಲ್ಲದೇ ಕೆಲವು ನಿಮಿಷಗಳ ಬಳಿಕ ಅದೇ ಕಾರಿನಲ್ಲಿ ವಾಪಸ್ ಬಂದ ದುಷ್ಕರ್ಮಿಗಳು ನಿತೀಶ್‌ ಅವರನ್ನು ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರು.ಆಗ ನಿತೀಶ್‌ ಸಮೀಪದ ಕೊಠಡಿಯೊಂದಕ್ಕೆ ತೆರಳಿ ರಂಜಿತ್ ಸಾಹು ಹಾಗೂ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಯುವಕರ ಗುಂಪನ್ನು ಕಂಡ ದುಷ್ಕರ್ಮಿಗಳು ಅವರ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಈ ವೇಳೆ ರಂಜಿತ್‌ಗೆ ಕಾರು ಡಿಕ್ಕಿ ಹೊಡೆದು ಆತನ ಕಾಲುಗಳ ಮೇಲೆ ಕಾರು ಹರಿಸಿ ಸುಮಾರು 100 ಮೀ. ದೂರ ಎಳೆದೊಯ್ದು ಹೊಸೂರು ಸರ್ವಿಸ್ ರಸ್ತೆಯ ಮಧ್ಯೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ರಂಜಿತ್‌ನ ಹಲವು ಮೂಳೆ ಮುರಿತವಾಗಿ, ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ರಂಜಿತ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಘಟನೆಯಲ್ಲಿ ನಿತೀಶ್‌ಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!