ಕನ್ನಡಪ್ರಭ ವಾರ್ತೆ ಬೆಂಗಳೂರು
ಪತ್ನಿ ಭುವನೇಶ್ವರಿ (39) ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಪತಿ ಬಾಲಮುರುಗನ್(40) ಎಂಬಾತನನ್ನು ಡಿ.23 ರಂದು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಬಾಲಮುರುಗನ್ ಪತ್ನಿಯ ಹತ್ಯೆ ಮಾಡಲು ಈ ಹಿಂದೆ ತಮಿಳುನಾಡು ಮೂಲದ ಮೌಳೇಶ್(35) ಎಂಬಾತನಿಗೆ ಸುಪಾರಿ ನೀಡಿದ್ದೆ. ಆದರೆ ಆತ ಹತ್ಯೆ ಮಾಡಲು ವಿಫಲನಾದ ಹಿನ್ನೆಲೆಯಲ್ಲಿ ತಾನೇ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಂದಿದ್ದೆ ಎಂದು ಹೇಳಿದ್ದ. ಈತನ ಹೇಳಿಕೆ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಮನೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ತಮಿಳುನಾಡಿನ ಸೇಲಂ ಜೈಲಿನಲ್ಲಿ ಇದ್ದ ಆರೋಪಿಯನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ.
1.5 ಲಕ್ಷಕ್ಕೆ ಸುಪಾರಿ ನೀಡಿದ್ದ ಪತಿ:ಆರೋಪಿ ಬಾಲಮುರುಗನ್ ಪತ್ನಿಯ ಕೊಲೆ ಮಾಡಲು ಆನ್‌ಲೈನ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದ. ಈ ವೇಳೆ ಮೌಳೇಶ್, ಬಾಲಮುರುಗನ್ ಸಂಪರ್ಕಕ್ಕೆ ಬಂದಿದ್ದ. ನಂತರ ಇಬ್ಬರ ನಡುವೆ ನಡೆದ ಮಾತುಕತೆಯಂತೆ 1.5 ಲಕ್ಷ ರು. ಸುಪಾರಿ ಪಡೆದು ಕೊಲೆ ಮಾಡಲು ಒಪ್ಪಿಕೊಂಡಿದ್ದ. ಇದಕ್ಕಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು, ಮೂರು ದಿನಗಳ ಕಾಲ ಖಾಸಗಿ ಹೋಟೆಲ್‌ನಲ್ಲಿ ಮೌಳೇಶ್ ತಂಗಿದ್ದ. ಬಳಿಕ ಈತನನ್ನು ಸಂಪರ್ಕಿಸಿದ್ದ ಬಾಲಮುರುಗನ್, ಮೌಳೇಶ್‌ಗೆ ಎರಡು ಕೆಲಸಗಳನ್ನು ವಹಿಸಿದ್ದ. ಮೊದಲನೇಯದು, ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿರುವ ತನ್ನ ಪತ್ನಿ ಭುವನೇಶ್ವರಿ ಜತೆ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಗುರುತಿಸಲು ನೀನು ಪತ್ತೇದಾರಿ ಕೆಲಸ ಮಾಡಬೇಕು ಹಾಗೂ ನಂತರ ಸಿ.ಸಿ ಕ್ಯಾಮೆರಾ ಕವರೇಜ್ ಇಲ್ಲದ ಸ್ಥಳದಲ್ಲಿ ಅವಳನ್ನು ಕೊಲ್ಲಬೇಕು ಎಂದು ಹೇಳಿ ಪಿಸ್ತೂಲ್‌ವೊಂದನ್ನು ನೀಡಿ ಕೊಲೆ ಮಾಡಲು ಸೂಚಿಸಿದ್ದ.
ಹೆಚ್ಚಿನ ಹಣ ಕೊಡಲು ನಿರಾಕರಿಸಿದ್ದ ಆರೋಪಿಭುವನೇಶ್ವರಿ ಅವರ ಕೊಲೆ ಮಾಡಲು ಮೌಳೇಶ್ ಹೆಚ್ಚಿನ ಹಣವನ್ನು ಕೇಳಿದ್ದ. ಆದರೆ ಬಾಲಮುರುಗನ್ ಹೆಚ್ಚಿನ ಹಣ ಕೊಡಲು ನಿರಾಕರಿಸಿದ್ದ. ಇದರಿಂದ ಮೌಳೇಶ್ ಬಾಲಮುರುಗನ್‌ಗೆ ತಿಳಿಸದೆ ತನ್ನ ಊರಿಗೆ ವಾಪಸ್ ಹೋಗಿದ್ದ. ಹೀಗಾಗಿ ಬಾಲಮುರುಗನ್ ತನ್ನ ಪತ್ನಿಯನ್ನು ತಾನೇ ಕೊಲ್ಲಲು ನಿರ್ಧರಿಸಿ ಕೊಂದಿದ್ದ. ಬಾಲಮುರುಗನ್ ತನ್ನ ಪತ್ನಿಯನ್ನು ಕೊಲೆ ಮಾಡುವ ಸಂಚಿನ ಬಗ್ಗೆ ಮಾಹಿತಿ ಇದ್ದರೂ ಕೂಡ ಮೌಳೇಶ್ ಪೊಲೀಸರಿಗೆ ತಿಳಿಸಿರಲಿಲ್ಲ. ನಂತರ ಈತ ಕಳ್ಳತನ ಪ್ರಕರಣದ ಬಂಧನವಾಗಿ ಸೇಲಂ ಜೈಲಿನಲ್ಲಿ ಇದ್ದ. ತನಿಖೆಯ ಭಾಗವಾಗಿ ಮಾಗಡಿ ರಸ್ತೆ ಪೊಲೀಸರು ಆತನನ್ನು ಶುಕ್ರವಾರ ಸೇಲಂ ಜೈಲಿನಿಂದ ಕರೆತಂದು ವಿಚಾರಣೆ ನಡೆಸಿದ್ದಾರೆ.