ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫಾರಂ-7ರನ್ನು ಅಕ್ರಮವಾಗಿ ಸಲ್ಲಿಸಿ ಮತಪಟ್ಟಿಯಿಂದ ನೈಜ ಮತದಾರರ ಹೆಸರನ್ನು ಅಳಿಸಿ ಹಾಕಲು ಯತ್ನಿಸಲಾಗಿದೆ ಎಂದು ಆರೋಪಿಸಿ ವೈಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫಾರಂ-7ರನ್ನು ಅಕ್ರಮವಾಗಿ ಸಲ್ಲಿಸಿ ಮತಪಟ್ಟಿಯಿಂದ ನೈಜ ಮತದಾರರ ಹೆಸರನ್ನು ಅಳಿಸಿ ಹಾಕಲು ಯತ್ನಿಸಲಾಗಿದೆ ಎಂದು ಆರೋಪಿಸಿ ವೈಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಲ್ಲೇಶ್ವರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ನೀಡಿದ ದೂರಿನ ಮೇರೆಗೆ ಬಿಜೆಪಿ ಪಕ್ಷದ ಬಿಎಲ್‌ಓ ವಸಂತ ಲಕ್ಷ್ಮೀ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರೋಪವೇನು?
ಹಲವು ದಿನಗಳಿಂದ ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ- 64ರಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಮತ ಕ್ಷೇತ್ರದಲ್ಲಿ ನಿವಾಸಿಗಳಾಗಿರುವ ಕೆಲ ಮತದಾರರನ್ನು ಗೈರು ಹಾಜರು ಅಥವಾ ಶಾಶ್ವತವಾಗಿ ಸ್ಥಳಾಂತರವಾಗಿದ್ದಾರೆ ಎಂದು ನಮೂನೆ-7ರನ್ನು ಭರ್ತಿ ಮಾಡಿ ಸುಳ್ಳು ದಾಖಲೆಯನ್ನು ಸಲ್ಲಿಸಿದ್ದಾರೆ ಎಂದು ಅನೂಪ್ ಆರೋಪಿಸಿದ್ದಾರೆ.
ಈ ಬಗ್ಗೆ ಕೆಲವು ದಾಖಲಾತಿಗಳನ್ನು ಪರಿಶೀಲಿಸಿ ನೋಡಲಾಗಿ ವಾರ್ಡ್ ಸಂಖ್ಯೆ-64 ರಲ್ಲಿನ ಮತಗಟ್ಟೆ ನಂಬರ್ 157 ರಲ್ಲಿ 122 , 155 ರಲ್ಲಿ 233, 156 ರಲ್ಲಿ 28, 158 ರಲ್ಲಿ 5, 154 ರಲ್ಲಿ 47, 205 ರಲ್ಲಿ 171, 203ರಲ್ಲಿ 3 ಹಾಗೂ 153ರಲ್ಲಿ 104 ಹೀಗೆ ಒಟ್ಟು 778 ಅರ್ಜಿಗಳು ಮತದಾರರು ಮತಕ್ಷೇತ್ರಗಳಲ್ಲಿ ವಾಸವಿದ್ದರೂ ಸಹಿತ ಗೈರುಹಾಜರಿದ್ದಾರೆಂದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆಂದು ನಮೂನೆ-7 ರನ್ನು ಭರ್ತಿ ಮಾಡಿ ಸುಳ್ಳು ದಾಖಲೆಯನ್ನು ಸಲ್ಲಿಸಿರುವುದು ಪತ್ತೆಯಾಗಿದೆ.
ಈ ಕೃತ್ಯದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ನಿರ್ದಿಷ್ಟ ಸಮುದಾಯದ ಮತಗಟ್ಟೆಗಳನ್ನು ಗುರಿಯಾಗಿಸಿಕೊಂಡು ಕಾನೂನುಬದ್ಧ ಮತದಾರರನ್ನು ಮತದಾರರ ಪಟ್ಟಿಯಿಂದ ವಂಚಿಸುವ ದುರುದ್ದೇಶದಿಂದ ಒಳಸಂಚು ಮಾಡಿದ್ದಾರೆ ಎಂದು ಅನೂಪ್ ಆಪಾದಿಸಿದ್ದಾರೆ.
ಈ ಅರ್ಜಿಗಳನ್ನು ಬಿಜೆಪಿ ಪಕ್ಷದ ಬೂತ್ ಮಟ್ಟದ ಪ್ರತಿನಿಧಿಸುವ ಜಿ.ಎಸ್.ವಸಂತಲಕ್ಷ್ಮಿ ಅವರ ಹೆಸರಿನಲ್ಲಿ ಸಲ್ಲಿಸಲಾಗಿದೆ ಎಂದು ಕಂಡು ಬಂದಿದೆ. ಹಲವು ಅರ್ಜಿಗಳ ಹೋಲಿಕೆಯಲ್ಲಿ ಅವುಗಳ ಮೇಲೆ ಕಾಣಿಸಿರುವ ಸಹಿಗಳು ಗಮನಾರ್ಹ ವ್ಯತ್ಯಾಸಗಳಿವೆ. ಹೀಗಾಗಿ ಈ ದಾಖಲಾತಿಗಳನ್ನು ವಸಂತ ಲಕ್ಷ್ಮೀ ಅಥವಾ ಅವರ ಹೆಸರಿನಲ್ಲಿ ಮತ್ಯಾರೋ ನಕಲು ಮಾಡಿ ಭರ್ತಿ ಮಾಡಿರಬರುವ ಶಂಕೆ ಇದೆ. ಹೀಗಾಗಿ ಈ ಅಕ್ರಮದ ಬಗ್ಗೆ ಕಾನೂನು ಪ್ರಕಾರ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.