ಕನ್ನಡಪ್ರಭ ವಾರ್ತೆ ಅಥಣಿ
ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಮೂಡಿರುವ ಭಯ ಹೊರ ಹಾಕಿ. ಕೊನೇ ಘಳಿಗೆಯಲ್ಲಿ ಅನಗತ್ಯ ಒತ್ತಡಕ್ಕೆ ಒಳಗಾಗುವುದರ ಬದಲು ಧೈರ್ಯದಿಂದ ಎದುರಿಸಬೇಕು. ಇದುವರೆಗೆ ಓದಿದನ್ನು ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ನಿರ್ಭೀತಿಯಿಂದ ಉತ್ತಮವಾಗಿ ಬರೆದು ಸಾಧನೆ ಮಾಡಬೇಕು ಎಂದು ಬೆಳಗಾವಿ ವಿಭಾಗದ ತೂಕ ಮತ್ತು ಅಳತೆ ಇಲಾಖೆ ಜಂಟಿ ನಿರ್ದೇಶಕ ಆರ್.ಎಸ್.ಮಾಳಿ ಹೇಳಿದರು.ಇಲ್ಲಿನ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ೨೦೨೪-೨೫ ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ 10ನೇ ತರಗತಿ ಪ್ರಮುಖವಾದ ಘಟ್ಟವಾಗಿದೆ. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆದು ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿದ ಅವರು ದಾರಿ ತಪ್ಪಿಸುವ ಹತ್ತಾರು ಅವಕಾಶಗಳ ಮಧ್ಯೆ, ಹೆತ್ತವರ ಕಣ್ಣೀರಿಗೆ ಕಾರಣವಾಗದೆ, ಕಠಿಣ ಪರಿಶ್ರಮದಿಂದ ನಿರ್ದಿಷ್ಟ ಗುರಿ ಮುಟ್ಟಿದಾಗ ಮಾತ್ರ ಹೆತ್ತ ಜೀವಗಳು ಸಂತಸ ಕಾಣಲು ಸಾಧ್ಯ. ಹೆತ್ತ ತಂದೆ ತಾಯಿಗೆ ಹಾಗೂ ಕಲಿಸಿದ ಗುರುಗಳಿಗೆ ಗೌರವ ತರುವ ಸಾಧಕರಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .ಸಮಾರಂಭದ ಅಧ್ಯಕ್ಷತೆ ವಹಿಸಿದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದಿoದ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದು ಅಸಾಮಾನ್ಯ ಸಾಧನೆ ಮಾಡಬಹುದು. ಹೆತ್ತ ತಂದೆ ತಾಯಂದಿರಿಗೆ, ಹುಟ್ಟಿದ ಊರಿಗೆ, ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಹೆಸರು ತರುವಂತೆ ಸಾಧನೆ ಮಾಡಿ ಸಮಾಜದಲ್ಲಿ ಗೌರವದಿಂದ ಬಾಳಿ, ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಎಲ್ಲೋ ಪ್ರಶ್ನೆಗಳಿಗೆ ನಿರ್ಭೀತಿಯಿಂದ ಉತ್ತರಗಳನ್ನ ಬರೆಯಿರಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಈ ವೇಳೆ ತೂಕ ಮತ್ತು ಅಳತೆ ಇಲಾಖೆಯ ಉಮೇಶ ಹುಡೇದ, ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಶಾಲೆಯ ಪ್ರಧಾನ ಗುರು ಟಿ.ಎ.ಮೊಗೇರ ಮತ್ತು ಶಾಲೆಯ ಸಿಬ್ಬಂದಿ ಹಾಜರಿದ್ದರು, ಶಿಕ್ಷಕ ವಿಶ್ವನಾಥ ಸೌದಾಗರ ನಿರೂಪಿಸಿದರು, ಕು.ಜಯಶ್ರೀ ಬೋಜನೆ ಸ್ವಾಗತಿಸಿ, ವಂದಿಸಿದರು.