ಗದಗ: ಸಿಎಂ ರಾಜೀನಾಮೆ ಕೊಡುವ ಸಂದರ್ಭ ನಿರ್ಮಾಣವಾಗಿದ್ದು, ಈಗ ಜಾತಿಗಣತಿ ದಾಳ ಉರುಳಿಸುವ ಪ್ರಯತ್ನ ಸಿದ್ಧರಾಮಯ್ಯ ಮಾಡಿದ್ದಾರೆ, ಆದರೆ ಸಿಎಂ ಸ್ಥಾನ ಉಳಿಸಲು ಸಾಧ್ಯವಿಲ್ಲ, ಕೆಲವೇ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ದಡ್ಡರಲ್ಲ, ನಿಮ್ಮ ಹೇಳಿಕೆ ರಾಜ್ಯದ ಜನ, ಶಾಸಕರು ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭದಲ್ಲಿ ಬಂದು ನಿಂತಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಕೂಡಾ ನಿರ್ಧಾರ ಮಾಡಿಯಾಗಿದೆ ಎಂದ ಅವರು, ಬಿಜೆಪಿ-ಜೆಡಿಎಸ್ ಪಾದಯಾತ್ರೆ ಪರಿಣಾಮ ಸಿಎಂ ರಾಜೀನಾಮೆ ಕೊಡುತ್ತಿದ್ದಾರೆ. ಮುಡಾದಲ್ಲಿ ಹಗರಣ ಆಗಿದೆ ಅಂತಾ ಸಿಎಂ ಒಪ್ಪಿಕೊಂಡಿದ್ದಾರೆ. ಸೈಟ್ ಕೂಡಾ ಮರಳಿ ಕೊಟ್ಟಿದ್ದಾರೆ. ರಾಜೀನಾಮೆ ಕೇಳಿದ್ದೇವೆ ರಾಜೀನಾಮೆಯನ್ನೂ ಕೊಡುತ್ತಾರೆ ನೋಡಿ ಎಂದರು.ಸಿಎಂ ಸಿದ್ಧರಾಮಯ್ಯ ಯಾರನ್ನು ಹೇಳುತ್ತಾರೆ ಅವರೇ ಮುಖ್ಯಮಂತ್ರಿ ಮಾಡಬೇಕು ಎಂದು ಹಠ ತೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ, ಭಂಡತನ ಮುಂದುವರೆಸಲು ಬಹಳ ದಿನ ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ನಲ್ಲಿರುವ ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಿಎಂ ರಾಜೀನಾಮೆ ನೀಡೋದು ಸತ್ಯ, ಅತಿ ಶೀಘ್ರದಲ್ಲೇ ನಿಮಗೆಲ್ಲ ಮಾಹಿತಿ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷ ಅನ್ನೋದು ಎಷ್ಟು ಸತ್ಯವೋ ಶಿಕಾರಿಪುರ ಶಾಸಕ ಅನ್ನೋದೋ ಕೂಡಾ ಅಷ್ಟೆ ಸತ್ಯ. ನಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ತಾಲೂಕಿನಿಂದ ಬಂದ ನಿಯೋಗ ತೆಗೆದುಕೊಂಡು ಭೇಟಿಯಾಗಿದ್ದೇನೆ. ಆದರೆ ನಾವು ವಿರೋಧ ಪಕ್ಷದಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದೇವೆ ಎನ್ನುವ ಸಂತೋಷ ನಮಗಿದೆ ಎಂದರು.ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳುತ್ತಿರುವವರೆಲ್ಲ ಸಿಎಂ ಆಕಾಂಕ್ಷಿಗಳು ಎಂದು ಸ್ಪೋಟಕ ಹೇಳಿಕೆ ನೀಡಿದ ವಿಜಯೇಂದ್ರ, ಸಿದ್ದರಾಮಯ್ಯ ಅವರನ್ನು ಖುಷಿ ಪಡೆಸಿದರೆ ನನ್ನ ಹೆಸರನ್ನು ಹೇಳುತ್ತಾರೆ ಎನ್ನುವ ಕಾರಣಕ್ಕಾಗಿ ಸಿಎಂ ಸಿದ್ಧರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಹೇಳುತ್ತಿದ್ದಾರೆ ಅಷ್ಟೇ, ಆದರೆ ಯಾರಲ್ಲೂ ಪ್ರಾಮಾಣಿತೆ ಇಲ್ಲ. ಸಿಎಂ ಕೆಳಗಿಳಿಯುತ್ತಾರೆ ಅನ್ನೋದು ಊಹಾಪೋಹ ಅಲ್ಲ. ಅದು ನೂರಕ್ಕೆ ನೂರು ಸತ್ಯವಾಗಿದೆ. ಕೆಳಗಿಳಿಯುತ್ತಿರುವುದು ಗೊತ್ತಾಗಿದೆ. ಯಾರ ಬಳಿ ಎಷ್ಟು ಜನ ಇದ್ದಾರೆ ಅಂತಾ ತೋರಿಸುವ ಸಾಹಸ ಕೆಲ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದರು.
ಕುಟುಂಬ ರಾಜಕಾರಣದಿಂದ ಬಿಜೆಪಿ ಹಾಳಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ ವಿಜಯೇಂದ್ರ, ಯಾವ ಈಶ್ವರಪ್ಪ..? ಅವರು ಬಿಜೆಪಿಯಲ್ಲಿಲ್ಲ. ಅವರ ಹೇಳಿಕೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು. ಆರ್ ಸಿಬಿ ಅಂದ್ರೇನು.. T20 ಮ್ಯಾಚ್ ಆಡೋದಕ್ಕೆ ಆರ್ ಸಿಬಿ ಇತ್ತು.ಬಿಜೆಪಿಯವರು ಸೇರಿ ನಾವು ಟೆಸ್ಟ್ ಆಡೋದಕ್ಕೆ ಹೊರಟಿದ್ದೇವೆ. ಲಾಂಗ್ ಇನಿಂಗ್ಸ್ ಆಡ್ತೀವಿ. ರಾಜ್ಯದ ಜನಕ್ಕೆ ಗೊತ್ತಿದೆ.. ಅವ್ರಿಗೆ ಒಳ್ಳೆದಾಗ್ಲಿ ಎಂದು ನಗುತ್ತಲೇ ಉತ್ತರಿಸಿದರು.