ಕನ್ನಡಪ್ರಭ ವಾರ್ತೆ ಕಾರ್ಕಳರಾಜ್ಯ ಸರ್ಕಾರ ನಡೆಸಲು ಹೊರಟಿರುವ ಗಣತಿಗೆ ಬಿಜೆಪಿ ಯಾವತ್ತೂ ವಿರೋಧ ಮಾಡಿಲ್ಲ. ನಮ್ಮ ವಿರೋಧ ಇರುವುದು ಸರ್ಕಾರ ಸಾಕಷ್ಟು ಪೂರ್ವತಯಾರಿ ಇಲ್ಲದೇ ಸಮೀಕ್ಷೆ ಮಾಡುವುದಕ್ಕೆ ಹೊರಟಿರುವುದಕ್ಕೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.ಸಮೀಕ್ಷೆಗೆ ವಿರೋಧ ಮಾಡಿ ಬಿಜೆಪಿ ಜನರ ದಾರಿ ತಪ್ಪಿಸುವುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಕುಮಾರ್, ಪೂರ್ವ ಸಿದ್ಧತೆ ಇಲ್ಲದ ಈ ಸಮೀಕ್ಷೆಯಿಂದ ಜನರಿಗಾಗಲಿ ಸರ್ಕಾರಕ್ಕಾಗಲಿ ಲಾಭ ಇಲ್ಲ. ಬದಲಾಗಿ ಸಿದ್ದರಾಮಯ್ಯ ಅಧಿಕಾರ ವಿಸ್ತರಣೆಗೆ ಅನುಕೂಲ ಆಗಲಿದೆ ಎಂದವರು ಹೇಳಿದ್ದಾರೆ.ಸಾಕಷ್ಟು ಸಿದ್ಧತೆ ಮಾಡಿ ನವೆಂಬರಿನಲ್ಲಿ ಸಮೀಕ್ಷೆ ಮಾಡಿ ಎಂದು ನಾವು ಹೇಳಿದ್ದೆವು. ಆದರೆ ಸಿದ್ದರಾಮಯ್ಯ ಅವರ ಸಿಎಂ ಅವಧಿ ನವೆಂಬರ್‌ನಲ್ಲಿ ಮುಗಿಯಲಿದೆ. ಅದಕ್ಕೆ ತರಾತುರಿಯಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಿಸುತ್ತಿದ್ದಾರೆ. ಪೂರ್ವತಯಾರಿ ಇಲ್ಲದೇ ಸಮೀಕ್ಷೆ ಮಾಡುವ ಶಿಕ್ಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಾಡದಿದ್ದರೆ ಸಸ್ಪೆಂಡ್ ಮಾಡುತ್ತಾರೆ. ಸಸ್ಪೆಂಡ್ ಮಾಡಬೇಕಾಗಿರುವುದು ಶಿಕ್ಷಕರನ್ನಲ್ಲ, ಸಿಎಂ ಸಿದ್ದರಾಮಯ್ಯರನ್ನು ಸಸ್ಪೆಂಡ್ ಮಾಡಬೇಕು ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ಸಮೀಕ್ಷೆಯಲ್ಲಿ ಭಾಗಿ ಆಗುವುದು ಕಡ್ಡಾಯ ಅಲ್ಲ ಎಂದು ಕೋರ್ಟ್ ಹೇಳಿದೆ. ಭಾಗಿ ಆಗಬೇಕೊ ಬೇಡವೋ ಎಂಬುದನ್ನು ನಾವು ರಾಜ್ಯದ ಜನತೆಗೆ ಬಿಡುತ್ತೇವೆ. ನಾವೆಲ್ಲೂ ಸಮೀಕ್ಷೆಗೆ ವಿರೋಧ ಮಾಡಿಲ್ಲ. ಆದರೆ ಪೂರ್ವತಯಾರಿ ಇಲ್ಲದೇ ಮಾಡುವ ಈ ಸಮೀಕ್ಷೆಯಿಂದ ನಾಳೆ ವೈಯಕ್ತಿಕ ಡೇಟಾ ಸೋರಿಕೆ ಆಗಲ್ಲ ಎನ್ನೋದು ಖಾತ್ರಿ ಏನು? ಈ ಬಗ್ಗೆ ಬಗ್ಗೆ ವಿರೋಧ ಇದೆ. ಸಿದ್ದರಾಮಯ್ಯ ಸಮೀಕ್ಷೆ ಮೂಲಕ ಸಮಾಜವನ್ನು ಒಡೆದು ಆಳುವ ನೀತಿಗೆ ವಿರೋಧವಿದೆ ಎಂದರು.ನೂರಾರು ಸಂಘ ಸಂಸ್ಥೆಗಳು ಸಮೀಕ್ಷೆ ವಿರೋಧ ಮಾಡಿವೆ. ಹಿಂದುಳಿದ ವರ್ಗಗಳ ಆಯೋಗವನ್ನು ಸ್ವತಂತ್ರವಾಗಿ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ. ಈ ಹಿಂದೆ ನೀಡಿರುವ ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ವರದಿ ಹೇಗೆ ಮೂಲೆ ಗುಂಪು ಮಾಡಿದರೋ ಹಾಗೆ ಈ ಸಮೀಕ್ಷೆಯ ವರದಿ ಕೂಡ ಮೂಲೆಗುಂಪೆ ಆಗಲಿದೆ ಎಂದು ಹೇಳಿದರು.ನಾವು ಸಬ್ ಕಾ ಸಾತ್ ಸಬ್ ಕಾ ವಿಕಾಸ್‌ಗೆ ಬದ್ಧ ಇದ್ದೇವೆ. ಆದರೆ ಸಿದ್ದರಾಮಯ್ಯ ಕಾ ಸಾಥ್ ಸಿದ್ದರಾಮಯ್ಯ ಕಾ ವಿಕಾಸ್ ಅಷ್ಟೇ. ಸಿದ್ದರಾಮಯ್ಯರದ್ದು ಸಮ ಸಮಾಜದ ನಿರ್ಮಾಣ ಗುರಿ ಅಲ್ಲ, ಅವರದ್ದು ಸಮಾಜ ಒಡೆಯುವ ಗುರಿ. ಅವರದ್ದು ಕೇವಲ ಸಮ ಸಮಾಜದ ಭಾಷಣ ಮಾತ್ರ, ಸಿದ್ದರಾಮಯ್ಯ ಆತ್ಮ ವಂಚನೆ ಮಾಡಿಕೊಳ್ಳುತಿದ್ದಾರೆ ಎಂದು ಸುನಿಲ್ ಆರೋಪಿಸಿದರು.