ಕಾಂಗ್ರೆಸ್‌ ಗೆದ್ದರೆ ಜಾತಿ ಗಣತಿ: ರಾಹುಲ್‌ ಗಾಂಧಿ

KannadaprabhaNewsNetwork |  
Published : May 03, 2024, 01:06 AM ISTUpdated : May 03, 2024, 10:41 AM IST
02ಕೆಪಿಆರ್‌ಸಿಆರ್ 01 ಮತ್ತು 02  | Kannada Prabha

ಸಾರಾಂಶ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡಲಿದೆ. ಒಮ್ಮೆ ಜಾತಿಗಣತಿ ಜನರ ಕೈ ಸೇರಿದ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದರು.

 ರಾಯಚೂರು/ಶಿವಮೊಗ್ಗ :  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡಲಿದೆ. ಒಮ್ಮೆ ಜಾತಿಗಣತಿ ಜನರ ಕೈ ಸೇರಿದ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದರು.

ಶಿವಮೊಗ್ಗ ಮತ್ತು ರಾಯಚೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು 10 ವರ್ಷದಲ್ಲಿ ಕೇವಲ 22 ಮಂದಿಗಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರದ ಸಂಪತ್ತನ್ನು ಅಂಬಾನಿ, ಅದಾನಿ ಸೇರಿ 22 ಮಂದಿ ಜೇಬಿಗೆ ಹಾಕಿದ್ದಾರೆ. 22 ಮಂದಿ ಮಾಡಿದ್ದ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಅವರು ಕೇವಲ 22 ಮಂದಿ ಕೋಟ್ಯಧಿಪತಿ ಮಾಡಲು ಹೊರಟ್ಟಿದ್ದಾರೆ. ನಾವು ಕೋಟ್ಯಂತರ ಮಂದಿ ಕೋಟ್ಯಧಿಪತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಚಾಟಿ ಬೀಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ ಮಾಡಿಸಿ, ದೇಶದ ಸಂಪತ್ತಿನಲ್ಲಿ ಯಾವ ಯಾವ ಜಾತಿಯವರ ಆಸ್ತಿ ಎಷ್ಟಿದೆ ಎಂಬುವುದನ್ನು ಬಯಲು ಮಾಡುತ್ತೇವೆ. ಜೊತೆಗೆ ದಲಿತರಿಗೆ, ಹಿಂದುಳಿದ ವರ್ಗ ಮತ್ತು ಆದಿವಾಸಿ ಜನಾಂಗದವರಿಗೆ ತಮ್ಮ ಆಸ್ತಿ ಎಷ್ಟಿದೆ ಎಂಬುವುದೂ ಗೊತ್ತಾಗಲಿದೆ. ಜಾತಿಗಣತಿ ನಿಮ್ಮ ಕೈ ಸೇರಿದ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಹೇಳಿದರು.

ನಡ್ಡಾ ರಾಜೀನಾಮೆ ನೀಡಲಿ: ಬಿಜೆಪಿಯವರು ಸಂವಿಧಾನ ಹಾಗೂ ಮೀಸಲಾತಿ ತೆಗೆದುಹಾಕಲು ಹೊರಟಿದ್ದಾರೆ. ಸಮಾನತೆ ಬಗ್ಗೆ ಮಾತನಾಡುವವರು ನಕ್ಸಲರು ಎಂದು ಬಿಜೆಪಿ ಅಧ್ಯಕ್ಷರು ಹೇಳುತ್ತಾರೆ. ಇದು ಸಂವಿಧಾನದ ಮೇಲಿನ ಅತಿದೊಡ್ಡ ಆಕ್ರಮಣವಾಗಿದೆ. ಇದರ ಬಗ್ಗೆ ಪ್ರಧಾನಿ ಮೋದಿ ಉತ್ತರಕೊಡಬೇಕು. ಆದರೆ ಮೋದಿ ಅವರು ಮೌನವನ್ನೇ ರೂಢಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಪಕ್ಷದ ನಾಯಕರು ಪದೇ ಪದೆ ಸಂವಿಧಾನ ಬದಲಿಸುವ, ರದ್ದುಪಡಿಸುವ ಹೇಳಿಕೆಗಳನ್ನು ನೀಡುತ್ತಿದ್ದರೂ ಮೋದಿ ಈ ಕುರಿತು ಒಂದೇ ಒಂದು ಮಾತು ಆಡುತ್ತಿಲ್ಲ. ನಡ್ಡಾ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್‌ ಆಗ್ರಹಿಸಿದರು.

ಕಾಂಗ್ರೆಸ್ ಸಂವಿಧಾನವನ್ನು ಉಳಿಸುವ ಕೆಲಸ ಮಾಡುತ್ತದೆ. ಸಮಸಮಾಜ ನಿರ್ಮಾಣ, ನಿಜವಾದ ಸಮುದಾಯಕ್ಕೆ ಮೀಸಲಾತಿ ಹಂಚಿಕೆ, ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರ ಅಭಿವೃದ್ಧಿಗೆ ಅಗತ್ಯವಾದ ಅಂಶಗಳನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದು ಇದೇ ವೇಳೆ ರಾಹುಲ್‌ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ