ಹುಬ್ಬಳ್ಳಿ: ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕಾರ ಮಾಡುವುದಿಲ್ಲ. ವರದಿಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಮಾಡಿಯೇ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಗೆ ಪರ-ವಿರೋಧ ಸ್ವಾಭಾವಿಕ. ಯಾವುದೇ ವರದಿ ಬಂದಾಗ ಸರ್ಕಾರ ಅದನ್ನು ನೂರಕ್ಕೆ ನೂರರಷ್ಟು ಒಪ್ಪುವುದಿಲ್ಲ. ಈ ವರದಿಯಿಂದ ರಾಜಕೀಯ ಲಾಭ ಅಥವಾ ನಷ್ಟವೇನೂ ಆಗುವುದಿಲ್ಲ. ವರದಿ ಕುರಿತಂತೆ ಕೆಲ ಸಮುದಾಯದವರು ಆಂತರಿಕವಾಗಿ ಇನ್ನೂ ಕೆಲವರು ಬಹಿರಂಗವಾಗಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ, ಈ ಕುರಿತು ವಿಶೇಷ ಅಧಿವೇಶನ ಕರೆಯಬೇಕು. ಅಲ್ಲಿ ಬಹಿರಂಗವಾಗಿ ಚರ್ಚೆಯಾಗುವುದು ಒಳಿತು ಎಂದರು.ವರದಿ ಕುರಿತಂತೆ ಶಾಮನೂರ ಶಿವಶಂಕರಪ್ಪ ಮತ್ತಿತರರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಎಲ್ಲರೂ ತಮ್ಮ ಅಭಿಮತ ವ್ಯಕ್ತಪಡಿಸಲು ಸ್ವತಂತ್ರರು. ಸದನದಲ್ಲಿ ಈ ಬಗ್ಗೆ ಚರ್ಚಿಸಿದರೆ ಎಲ್ಲ ವಿಷಯಗಳು ಹೊರಬರುತ್ತವೆ. ಹೀಗಾಗಿ, ವಿಶೇಷ ಅಧಿವೇಶನ ಕರೆಯುವಂತೆ ಅವರು ಆಗ್ರಹಿಸಿದರು.
ಪ್ರತ್ಯೇಕ ಸಭೆ: ಇನ್ನು ವರದಿ ಕುರಿತಂತೆ ನಮ್ಮ ಪಕ್ಷದಲ್ಲೇ ಪರ ವಿರುದ್ಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಪಕ್ಷದ ಜತೆಗೆ ಸಮಾಜದ ಬಗ್ಗೆಯೂ ವಿಚಾರ ಮಾಡಬೇಕಾಗುತ್ತದೆ. ನಮ್ಮಲ್ಲಿ ಚರ್ಚಿಸಿದ ಬಳಿಕ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುವುದು ಎಂದು ಸಚಿವರು ಹೇಳಿದರು.ರಾಜ್ಯಾದ್ಯಂತ ಜನಾಕ್ರೋಶ: ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಜನಾಕ್ರೋಶ ಸಮಾವೇಶ ವಿಚಾರ ಕುರಿತಾಗಿ ಮಾತನಾಡಿದ ಅವರು, ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ವಕ್ಫ್ ಮಸೂದೆಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕೋ ಬೇಡವೋ ಎನ್ನುವ ಕುರಿತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದ ಅವರು, ಸಂಪುಟ ಪುನರ್ ರಚನೆ ವಿಚಾರ ತಮಗೆ ತಿಳಿದಿಲ್ಲ. ಅದು ಸಿಎಂ, ಡಿಸಿಎಂ ವಿವೇಚನೆಗೆ ಬಿಟ್ಟದ್ದು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಗೆ ಮೀರಿದ್ದು, ಅದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
ಸರ್ಕಾರ ಉರುಳಿಸಲು ಸತತ ಪ್ರಯತ್ನ: ರಾಜ್ಯ ಸರ್ಕಾರ ಕೆಡವಲು ಪ್ರಧಾನಿ ಮೋದಿ ಯತ್ನಿಸುತ್ತಾರೆ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರದ ಕೊನೆ ದಿನವಿದ್ದರೂ ಅವರು ಕೆಡವಲು ಪ್ರಯತ್ನ ಮಾಡುತ್ತಾರೆ. ಸರ್ಕಾರ ರಚನೆ ಮಾಡಿದ ದಿನದಿಂದಲೂ ಇದನ್ನೇ ಹೇಳುತ್ತಿದ್ದೇನೆ. ನಾವು 140 ಶಾಸಕರಿದ್ದೇವೆ. ಹೀಗಾಗಿ, ನಮಗೆ ಸರ್ಕಾರ ಪತನದ ಭೀತಿ ಇಲ್ಲ ಎಂದು ಹೇಳಿದರು.