ಕೆಡಿ ಕೋಟೆಯಲ್ಲಿ ಜಾತಿ ಸಂಘರ್ಷ: ದಲಿತರ ಮೇಲೆ ಹಲ್ಲೆ

KannadaprabhaNewsNetwork |  
Published : Aug 02, 2026, 01:45 AM IST
ಚಿತ್ರ 1 | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕೆ.ಡಿ.ಕೋಟೆಯಲ್ಲಿ ಶುಕ್ರವಾರ ರಾತ್ರಿ ಸವರ್ಣೀಯರಿಂದ ಹಲ್ಲೆಗೊಳಗಾದ ಮಾದಿಗ ಸಮುದಾಯದವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

ಕನ್ನಡಪ್ರಭವಾರ್ತೆ ಚಳ್ಳಕೆರೆ ಚಳ್ಳಕೆರೆ ತಾಲೂಕು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೇಣುಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಮದೇವರಕೋಟೆ (ತಿಮ್ಮಲಾಪುರ) ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಕ್ಷುಲ್ಲಕ ಕಾರಣಕ್ಕೆ ಸವರ್ಣೀಯರು ಮಾದಿಗ ಸಮುದಾಯದವರ ಮೇಲೆ ಕಾಲೋನಿಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಶುಕ್ರವಾರ ತಡರಾತ್ರಿಯೇ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು 250ಕ್ಕೂ ಹೆಚ್ಚು ನಾಯಕ ಸಮುದಾಯದ ಕುಟುಂಬಗಳು ಹಾಗೂ ಇನ್ನಿತರ ಸಮುದಾಯಗಳ ಜೊತೆಗೆ ಸುಮಾರು 30 ಮಾದಿಗ ಸಮುದಾಯದ ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿವೆ. ದೀರ್ಘಕಾಲದಿಂದ ಈ ಗ್ರಾಮದಲ್ಲಿ ಮಾದಿಗ ಸಮುದಾಯದವರು ಸಾಮಾಜಿಕ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಎದುರಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ದೇವಸ್ಥಾನ ಪ್ರವೇಶ ನಿರಾಕರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಮಾನವಾಗಿ ಕುಳಿತುಕೊಳ್ಳಲು ಅವಕಾಶ ನೀಡದಿರುವುದು, ಸಭೆ-ಸಮಾರಂಭಗಳಲ್ಲಿ ಎಲ್ಲರೊಂದಿಗೆ ಬೆರೆಯಲು ಅವಕಾಶ ನೀಡದಿರುವುದು ಸೇರಿದಂತೆ ಸಂವಿಧಾನ ವಿರೋಧಿ ಆಚರಣೆಗಳು ನಡೆಯುತ್ತಿವೆ ಎಂಬ ಆರೋಪಗಳಿವೆ.

31ರಂದು ಶುಕ್ರವಾರ ಸಂಜೆ ಸುಮಾರು 7.00 ರಿಂದ 8.00 ಗಂಟೆಯ ನಡುವೆ, ಸವರ್ಣೀಯ ಸಮುದಾಯದ ಕೆಲವರು ಮಾದಿಗ ಸಮುದಾಯದ ಸುಮಾರು 30 ಮನೆಗಳಿಗೆ ನುಗ್ಗಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಪರಶುರಾಂಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೂದಿಮುಚ್ಚಿದ ಕೆಂಡ:

ಗ್ರಾಮದಲ್ಲಿ ಕೆಲ ತಿಂಗಳುಗಳಿಂದ ಕೆಲವು ವಿಷಯಗಳಿಗೆ ಮಾದಿಗ ಮತ್ತು ಸವರ್ಣೀಯ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳು ಇದ್ದವು ಎನ್ನಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ ಎಂದು ಪ್ರಶ್ನಿಸಿದ ಮಾದಿಗ ಸಮುದಾಯದ ಯುವಕನ ಮೇಲೆ ಹಲ್ಲೆಯೂ ನಡೆದಿತ್ತು. ಈ ಪ್ರಕರಣ ರಾಜಿ ಪಂಚಾಯ್ತಿಯಲ್ಲಿ ಕೊನೆಗೊಂಡಿತ್ತು. ಇದಲ್ಲದೇ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣ ಮಂಟಪದಲ್ಲಿ ಮಾದಿಗರ ಶುಭಕಾರ್ಯಗಳಿಗೆ ಅವಕಾಶ ಇರಲಿಲ್ಲ. ಹೋಟೆಲ್, ದೇವಸ್ಥಾನಗಳಿಗೆ ಮುಕ್ತ ಪ್ರವೇಶ ಇರಲಿಲ್ಲ. ಇದೆಲ್ಲದರಿಂದ ಬೇಸರಗೊಂಡಿದ್ದ ಮಾದಿಗ ಸಮುದಾಯದ ಜನರು ಊರಿನ ಹಬ್ಬ ಹರಿದಿನಗಳಲ್ಲಿ ಯಾವುದೇ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳದೇ ಇದ್ದ ಪರಿಣಾಮ ಸವರ್ಣೀಯ ಸಮುದಾಯದ ಕೆಲವರು ಇದರಿಂದ ಅಸಮಾಧಾನಗೊಂಡಿದ್ದರು. ಇಂತಹ ಅನೇಕ ವಿಷಯಗಳು ಎರಡೂ ಸಮುದಾಯಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಮಡುಗಟ್ಟಿಕೊಂಡಿದ್ದರಿಂದ ಇದೀಗ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಸಂಘರ್ಷದ ರೂಪ ಪಡೆದಿದೆ ಎನ್ನುವುದು ನೊಂದ ಸಮುದಾಯದವರ ಅಭಿಪ್ರಾಯ.

ನೊಂದ ಮಾದಿಗ ಸಮುದಾಯದ 14ಜನ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಶುರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಕಾರ್ಯಕ್ಕೆ ಶ್ಲಾಘನೆ
ಶೈಕ್ಷಣಿಕ ಸೇವಾ ಚಟುವಟಿಕೆಗಳಿಗೆ ಆದ್ಯತೆ: ರಾಜುಚಂದ್ರಶೇಖರ್‌